2026-06-08 03:55:38

H Vishwanath | ಪತಿಗೆ ಹೆಂಡ ಕುಡಿಸಿ ಅದೇ ಹಣವನ್ನು ಪತ್ನಿಗೆ ನೀಡುವುದು ಸರಿಯೇ ಸರ್ಕಾರಕ್ಕೆ ಎಚ್ವಿ ಶ್ವನಾಥ್‌ ತರಾಟೆ | Speed News Kannada

H Vishwanath | ಪತಿಗೆ ಹೆಂಡ ಕುಡಿಸಿ ಅದೇ ಹಣವನ್ನು ಪತ್ನಿಗೆ ನೀಡುವುದು ಸರಿಯೇ ಸರ್ಕಾರಕ್ಕೆ ಎಚ್ವಿ ಶ್ವನಾಥ್‌ ತರಾಟೆ | Speed News Kannada

ಮೈಸೂರು: ಐದು ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಸಮೀಕ್ಷೇ ನಡೆಸಲು ತಜ್ಞರ ಸಮಿತಿ ರಚಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಗ್ಯಾರಂಟಿಗಳಿಂದ ಯಾವ ರೀತಿ ಅಭಿವೃದ್ಧಿಯಾಗಿದೆ ಎಂಬುದನ್ನು ಸರ್ಕಾರ ಹೇಳಬೇಕು. ನಿರ್ದಿಷ್ಟ ಮಾನದಂಡಗಳನ್ನು ಇಟ್ಟುಕೊಳ್ಳದೇ ಎಲ್ಲರಿಗೂ ಗ್ಯಾರಂಟಿಗಳನ್ನು ವಿಸ್ತರಿಸಿದ್ದರಿಂದ ಆರ್ಥಿಕ ಶಿಸ್ತು ಕಾಣೆಯಾಗಿದೆ. ಜನರ ಕಟ್ಟಿದ ತೆರಿಗೆ ಹಣವನ್ನೆಲ್ಲ ಉಚಿತ ಕೊಡುಗೆಗಳಿಗೆ ಬಳಸುತ್ತಿರುವುದರಿಂದ ಅಭಿವೃದ್ಧಿ ಸ್ಥಗಿತಗೊಂಡಿದೆ. ಈ ಅನಾಹುತಗಳಿಗೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ ಎಂದು ಆಪಾದಿಸಿದರು.
ಸರ್ಕಾರದ ಹಣದಲ್ಲಿ ಉಚಿತ ಕೊಡುಗೆಗಳನ್ನು ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಜನರನ್ನು ಸಬಲೀಕರಣ‌ಗೊಳಿಸಿ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ. ವೃದ್ಧಾಪ್ಯ ವೇತನ, ಅಂಗವಿಕಲರ ವೇತನಕ್ಕೆ ಮಾನದಂಡವಿದೆ. ಆದರೆ, ಗ್ಯಾರಂಟಿಗಳಿಗೆ ಯಾವ ಮಾನದಂಡವಿದೆ ಎಂದರು.
ಹೆಚ್ಚಿದ ಸಾಲದ ಹೊರೆ: ರಾಜ್ಯಕ್ಕೆ ಈಗ  ರೂ.7.50 ಲಕ್ಷ ಕೋಟಿ ಸಾಲದ ಹೊರೆ ಇದೆ. ಇದರಲ್ಲಿ ರೂ. 5 ಲಕ್ಷ ಕೋಟಿ ಸಾಲ ಮಾಡಿದ ಸಾಧನೆ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಸಾಲ ಮಾಡಿ ಉಚಿತ ಕೊಡುಗೆ ನೀಡುವುದು ಎಷ್ಟು ಸರಿ? ಇದೇನಾ ಸಿದ್ದರಾಮಯ್ಯ ಅವರ ಆರ್ಥಿಕ ತಜ್ಞತೆ? ಎಂದು ವಾಗ್ದಾಳಿ ನಡೆಸಿದರು. 
ಜನರಿಗೆ ಮದ್ಯ ಕುಡಿಸಿ ಆ ಪಾಪದ ಹಣ ರೂ.45 ಸಾವಿರ ಕೋಟಿಯಲ್ಲಿ ಉಚಿತ ಕೊಡುಗೆ ‌ಕೊಡುತ್ತಿದ್ದೀರಿ. ಪತಿಗೆ ಹೆಂಡ ಕುಡಿಸುವುದು, ಅದರಲ್ಲಿ ಬರುವ ಹಣವನ್ನೇ ಪತ್ನಿಗೆ ಕೊಡುವುದು ನಾಚಿಕೆಗೇಡಲ್ಲವೇ? ಎಂದು ಪ್ರಶ್ನಿಸಿ ಇದರ ಬದಲಿಗೆ ಉಚಿತವಾಗಿ ಶಿಕ್ಷಣ ಹಾಗೂ ಆರೋಗ್ಯ ಚಿಕಿತ್ಸೆ ಕೊಡಿ ಎಂದು ಹೇಳಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.