ಚಿತ್ರದುರ್ಗ: ಮುಖ್ಯಮಂತ್ರಿಗಳು ಗ್ಯಾರಂಟಿಗಳಿಂದ ಬೀಗುತ್ತಿದ್ದಾರೆ. ನಿಮ್ಮ ಗ್ಯಾರಂಟಿಗಳ ಬಗ್ಗೆ ಅಷ್ಟೊಂದು ವಿಶ್ವಾಸವಿದ್ದರೆ 15 ದಿನ ಬಾಗಲಕೋಟೆಯಲ್ಲಿ ಏಕೆ ಕೂತಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪ ಚುನಾವಣೆಯ ಸೋಲಿನಿಂದ ಹತಾಶರಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಗೃಹಲಕ್ಷ್ಮಿ ಯೋಜನೆ ಇವತ್ತು ಚುನಾವಣಾ ಲಕ್ಷ್ಮಿಯಾಗಿ ಪರಿವರ್ತನೆಯಾಗಿದೆ. ಇವರು ಬಡವರಿಗೆ ಯೋಜನೆಗಳನ್ನು ನೀಡಲಿ. ಇವರೊಬ್ಬರೇ ಯೋಜನೆಗಳನ್ನು ನೀಡಿಲ್ಲ. ಯಡಿಯೂರಪ್ಪನವರು ಹಿಂದೆ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ಬೈಸಿಕಲ್ ಯೋಜನೆಗಳನ್ನು ನೀಡಿದ್ದರು. ಇನ್ನೂ ಹಲವು ಒಳ್ಳೆಯ ಯೋಜನೆ ಕೊಟ್ಟಿದ್ದಾರೆ. ಆದರೆ, ಗೃಹಲಕ್ಷ್ಮಿ ಇವತ್ತು ಚುನಾವಣಾ ಲಕ್ಷ್ಮಿಯಾಗಿರುವುದು ಖಂಡಿತ ಸರಿಯಲ್ಲ ಎಂದು ಆಕ್ಷೇಪಿಸಿದರು.
ಪ್ರತಿ ತಿಂಗಳ ಬದಲು ಹಣವನ್ನು ತಡೆಹಿಡಿದು ಉಪ ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡಿದ್ದಾರೆ. ಮುಂದಿನ ಕಂತನ್ನು ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಂದಾಗಲೇ ಬಿಡುಗಡೆ ಮಾಡಲಿದ್ದಾರೆ ಎಂದರು. ಇವರು ಜನರಿಗೆ ಆಮಿಷವೊಡ್ಡುವ ರೀತಿಯಲ್ಲಿ ಯೋಜನೆ ನೀಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ದೂರದೃಷ್ಟಿಯಿಂದ ಭಾಗ್ಯಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ತಂದಿದ್ದರು ಎಂದರು.
ಜನರ ಕ್ಷಮೆ ಕೇಳಲು ಒತ್ತಾಯ:
ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿಯವರು ಪ್ರವಾಸ ಮಾಡಿದ್ದರು. ರಾಜ್ಯ ಹೈಕೋರ್ಟಿನ ಆದೇಶದಂತೆ ಶೃಂಗೇರಿಯಲ್ಲಿ ಮರು ಮತ ಎಣಿಕೆ ನಡೆದು ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಗೆದ್ದಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬಾಬಾಸಾಬೇಬ ಅಂಬೇಡ್ಕರ್, ಸಂವಿಧಾನದ ಬಗ್ಗೆ ಕಾಂಗ್ರೆಸ್ಸಿನವರು ಬಹಳ ಮುದ್ದುಮುದ್ದಾಗಿ ಮಾತನಾಡುತ್ತಾರೆ. ಆದರೆ, ಡಾ. ಬಾಬಾಸಾಬೇಬ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಚಾರ ಮಾಡುವ ಕೆಲಸವನ್ನು ಕಾಂಗ್ರೆಸ್ಸಿನವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.