2026-03-07 05:09:57

Govinda Karajola | ಎಸ್‍ಸಿ ಎಸ್‍ಟಿ ಅನುದಾನ ಗ್ಯಾರಂಟಿಗೆ ಬಳಸಿದರೆ ಉಗ್ರ ಹೋರಾಟ ಗೋವಿಂದ ಕಾರಜೋಳ ಎಚ್ಚರಿಕೆ | Speed News Kannada

Govinda Karajola | ಎಸ್‍ಸಿ ಎಸ್‍ಟಿ ಅನುದಾನ ಗ್ಯಾರಂಟಿಗೆ ಬಳಸಿದರೆ ಉಗ್ರ ಹೋರಾಟ ಗೋವಿಂದ ಕಾರಜೋಳ ಎಚ್ಚರಿಕೆ | Speed News Kannada

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. 2.85 ಲಕ್ಷ ಹುದ್ದೆಗಳು ಖಾಲಿ ಇದ್ದು, ಖಜಾನೆ ಖಾಲಿ ಆದ ಕಾರಣಕ್ಕೆ ನೇಮಕಾತಿ ನಡೆಯುತ್ತಿಲ್ಲ. ಮೀಸಲಾತಿ ಗೊಂದಲ ಎಂಬ ಕಾರಣವನ್ನು ಸೃಷ್ಟಿಸಿ ನೇಮಕಾತಿ ಮುಂದೂಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಇನ್ನೂ ಒಳ ಮೀಸಲಾತಿ ಜಾರಿಯಾಗಿಲ್ಲ ಎಂದು ಬಿಜೆಪಿ ನಿಯೋಗವು ಇಂದು  ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಗಮನ ಸೆಳೆಯಿತು. ಬಳಿಕ ಗೋವಿಂದ ಕಾರಜೋಳ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ನೇಮಕಾತಿ ಇಲ್ಲದೇ ವಿದ್ಯಾವಂತ ಯುವಜನತೆ ನಿರಾಶರಾಗಿದ್ದಾರೆ. ಅವರನ್ನು ನಿರಾಶರಾಗಲು, ಬಿಡುವುದಿಲ್ಲ. ನಾವು ನೇಮಕಾತಿಯ ಪರವಾಗಿದ್ದೇವೆ. ಒಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟಿನ ಆದೇಶ ಪಾಲಿಸಬೇಕು. ವರದಿಗಳನ್ನು ಗಮನದಲ್ಲಿ ಇಟ್ಟುಕೊಂಡು ಒಳ ಮೀಸಲಾತಿ ಮಾಡಬೇಕಿತ್ತು. ತರಾತುರಿಯಲ್ಲಿ ಸಂಜೆ 6 ಗಂಟೆಗೆ ಒಳ ಮೀಸಲಾತಿ  ಬಿಲ್ ಮಂಡಿಸಿ, ಚರ್ಚೆ ಇಲ್ಲದೇ ಮಂಜೂರು ಮಾಡಿಕೊಂಡು ಓಡಿ ಹೋದುದನ್ನು ಖಂಡಿಸುವುದಾಗಿ ತಿಳಿಸಿದರು.
ಎಸ್‍ಇಪಿ, ಟಿಎಸ್‍ಪಿ ಹಣ ಅನ್ಯ ಉದ್ದೇಶಕ್ಕೆ ಬಳಸಿದರೆ ಹೋರಾಟ:
ಎಸ್‍ಇಪಿ, ಟಿಎಸ್‍ಪಿಯ 39 ಸಾವಿರ ಕೋಟಿ ಮೊತ್ತವನ್ನು ಸಿದ್ದರಾಮಯ್ಯನವರ ಸರಕಾರ ಬೇರೆ ಉದ್ದೇಶಕ್ಕೆ ಬಳಸಿದೆ. ಹೊಸ ಬಜೆಟ್‍ನಲ್ಲಿ ಎಸ್‌ ಸಿ ಎಸ್‌ ಟಿ ಸಮುದಾಯಗಳಿಗೆ ನೀಡುವ ಅನುದಾನವನ್ನು ಗ್ಯಾರಂಟಿಗಳು ಮತ್ತಿತರ ಉದ್ದೇಶಕ್ಕೆ ಬಳಸಬಾರದು. ಅದು ಕೇವಲ ಎಸ್‍ಸಿ, ಎಸ್‍ಟಿ ಜನಾಂಗದ ಮಕ್ಕಳ ಉದ್ಯೋಗ, ಶಿಕ್ಷಣ, ಭೂ ಒಡೆತನ, ಗಂಗಾ ಕಲ್ಯಾಣ ಸೇರಿ ಅವರ ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಅನ್ಯ ಉದ್ದೇಶಕ್ಕೆ ಬಳಸಿದರೆ ಸರಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ನರೇಂದ್ರ ಮೋದಿಜೀ ಅವರ ಸರಕಾರದ ಪ್ರಯತ್ನ:
ರಾಜ್ಯದಲ್ಲಿ ಎಸ್‍ಸಿ ಪಟ್ಟಿಯಲ್ಲಿ ಬರುವ 101 ಜಾತಿಗೆ ಸಮರ್ಪಕವಾಗಿ ಮೀಸಲಾತಿ ಸೌಲಭ್ಯ ದೊರಕುತ್ತಿಲ್ಲ. ಮಾದಿಗರ ಸಮುದಾಯದವರು ಹಲವು ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದರು. ನರೇಂದ್ರ ಮೋದಿ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಹಾಕಿಸಿ, ಸಾಲಿಸಿಟರ್ ಜನರಲ್, ಅಟಾರ್ನಿ ಜನರಲ್ ಅವರು ಸ್ವತಃ ಕೋರ್ಟ್ ಮುಂದೆ ಹಾಜರಾಗಿ ವಾದ ಮಂಡಿಸಿದ್ದರು. ಮೋದಿ ಅವರ ಸರಕಾರವು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ; ಒಳ ಮೀಸಲಾತಿ ಕೊಡಲು ಒಪ್ಪಿಗೆ ಇದೆ ಎಂದು ತಿಳಿಸಿತ್ತು. ಸುಪ್ರೀಂ ಕೋರ್ಟ್ ಆಗಸ್ಟ್ 1, 2024 ರಂದು ಆದೇಶ ಮಾಡಿದೆ. ಒಳ ಮೀಸಲಾತಿ ಕೊಡಲು ರಾಜ್ಯ ಸರಕಾರಕ್ಕೆ ಅಧಿಕಾರ ಇದೆ ಎಂದು ತಿಳಿಸಿದೆ ಎಂದರು.
ಸರ್ವ ಪಕ್ಷಗಳ ಅಭಿಪ್ರಾಯ ಪಡೆದಿಲ್ಲ: 
ಸಿದ್ದರಾಮಯ್ಯನವರ ಸರಕಾರವು ಬಿಲ್ ಮಂಡಿಸುವ ಮೊದಲು ಸರ್ವ ಪಕ್ಷಗಳ ಅಭಿಪ್ರಾಯ ಪಡೆಯಲಿದೆ ಎಂಬ ನಿರೀಕ್ಷೆ ನಮ್ಮದಾಗಿತ್ತು. ಸಿದ್ದರಾಮಯ್ಯನವರ ಸರಕಾರವು ಏಕಪಕ್ಷೀಯವಾಗಿ ನಿರ್ಣಯ ಮಾಡಿತು. ಯಾವುದನ್ನೂ ಶಾಸನಬದ್ಧವಾಗಿ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ, ಮಾಧುಸ್ವಾಮಿ ಅವರ ವರದಿಯಂತೆಯೂ ಮಾಡಿಲ್ಲ. ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯಂತೆಯೂ ಮಾಡಿಲ್ಲ ಎಂದು ಟೀಕಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.