ಚೆನ್ನೈ: ಸರ್ಕಾರ ರಚಿಸಲು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರನ್ನು ಆಹ್ವಾನಿಸದಿರುವ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವಿರುದ್ಧ ವಿವಿಧ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಸತತ ಎರಡು ದಿನ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರೂ ರಾಜ್ಯಪಾಲರು ರಾಜ್ಯಪಾಲರು ಸರ್ಕಾರ ರಚನೆಗೆ ಅಗತ್ಯವಿರುವ 117 ಸದಸ್ಯರ ಪಟ್ಟಿ ನೀಡುವಂತೆ ತಿಳಿಸಿದ್ದಾರೆ. ಇದರಿಂದ ಸರಕಾರ ರಚನೆ ಮುಂದಕ್ಕೆ ಹೋಗಿದೆ.
ರಾಜ್ಯಪಾಲರ ನಡೆಯನ್ನು ಕಾಂಗ್ರೆಸ್ ಹಾಗೂ ನಟ ಕಮಲ್ ಹಾಸನ್ ಟೀಕಿಸಿದ್ದಾರೆ.
ಸರ್ಕಾರ ರಚನೆಗೆ ಅವಕಾಶ ನೀಡದಂತೆ ಬಿಜೆಪಿ ರಾಜ್ಯಪಾಲರ ಮೇಲೆ ಒತ್ತಡ ಹೇರುತ್ತಿದೆ. ವಿಜಯ್ ಸಿಎಂ ಆಗುವುದು ಕೇಸರಿ ಪಕ್ಷಕ್ಕೆ ಇಷ್ಟವಿಲ್ಲ. ಹೀಗಾಗಿ ರಾಜ್ಯಪಾಲರ ಮೂಲಕ ಸರ್ಕಾರ ರಚನೆಗೆ ಅಡ್ಡಿಪಡಿಸುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ವಿಜಯ್ ಪರ ನಟ ಕಮಲ್ ಹಾಸನ್ ಬ್ಯಾಟಿಂಗ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಟ್ವೀಟ್ ಮಾಡಿ 108 ಸ್ಥಾನಗಳನ್ನು ಗೆದ್ದಿರುವ ಟಿವಿಕೆ ಪಕ್ಷದ ಮುಖಂಡ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸದಿರುವುದು ತಮಿಳುನಾಡಿನ ಜನರ ಜನಾದೇಶವನ್ನು ಅಗೌರವಗೊಳಿಸಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಎಸ್.ಆರ್. ಬೊಮ್ಮಾಯಿ ಪ್ರಕರಣವನ್ನು ನೆನಪಿಸಿರುವ ಅವರು ಬಹುಮತ ಸಾಬೀತಾಗಬೇಕಿರುವುದು ರಾಜ್ಯಪಾಲರ ಕಚೇರಿಯಲ್ಲಿ ಅಲ್ಲ, ವಿಧಾನಸಭೆಯಲ್ಲಿ ಎಂದು ತಿಳಿಸಿದ್ದಾರೆ. ರಾಜ್ಯಪಾಲರ ನಡೆಯಿಂದ 233 ಚುನಾಯಿತ ಸದಸ್ಯರು ಇನ್ನೂ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದು ರಾಜ್ಯಕ್ಕೆ ಮಾಡಿದ ಅವಮಾನ ಎಂದು ಕಮಲ್ ಹಾಸನ್ ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 5 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ತನ್ನ ಬೆಂಬಲ ಸೂಚಿಸಿದ್ದು, ಟಿವಿಕೆ ಒಟ್ಟು 113 ಶಾಸಕರ ಬಲ ಹೊಂದಿದೆ. ಆದರೆ 'ಮ್ಯಾಜಿಕ್ ಸಂಖ್ಯೆ ಆಗಿರುವ 117 ಶಾಸಕರ ಬೆಂಬಲ ಇರುವುದಕ್ಕೆ ದಾಖಲೆ ಒದಗಿಸುವಂತೆ ರಾಜ್ಯಪಾಲರು ಇಂದೂ ಸಹ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಸಿಪಿಐ, ಸಿಪಿಐಎಂ ಪಕ್ಷಗಳು ಟಿವಿಕೆಗೆ ಬೆಂಬಲ ಸೂಚಿಸಿವೆ. ಬಹುಶಃ ಇಂದು ಸಂಜೆಯೊಳಗೆ ರಾಜ್ಯಪಾಲರಿಗೆ 117 ಶಾಸಕರ ಪಟ್ಟಿ ನೀಡುವ ಸಂಭವವಿದೆ.