2026-07-25 01:49:25

GBA officials felicitated | ರೌಡಿಗಳ ದಾಳಿ ನಡುವೆಯೂ ಫುಟ್ ಪಾತ್ ತೆರವು ಜಿಬಿಎ ಅಧಿಕಾರಿಗಳಿಗೆ ಸನ್ಮಾನ! | SNK

GBA officials felicitated | ರೌಡಿಗಳ ದಾಳಿ ನಡುವೆಯೂ ಫುಟ್ ಪಾತ್ ತೆರವು ಜಿಬಿಎ ಅಧಿಕಾರಿಗಳಿಗೆ ಸನ್ಮಾನ! | SNK

ಬೆಂಗಳೂರು: ಶಿವಾಜಿನಗರ ಬಸ್ ನಿಲ್ದಾಣದ ಬಳಿ ದಶಕಗಳಿಂದ ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದ ಅನಧಿಕೃತ ಮಳಿಗೆಗಳನ್ನು ಯಶಸ್ವಿಯಾಗಿ ತೆರವುಗೊಳಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳನ್ನು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ವಿಕಾಸಸೌಧದಲ್ಲಿ ಆತ್ಮೀಯವಾಗಿ ಗೌರವಿಸಿದರು. ಕಾರ್ಯಾಚರಣೆಯ ವೇಳೆ ಕಿಡಿಗೇಡಿಗಳಿಂದ ಹಲ್ಲೆಗೊಳಗಾದರೂ ಧೃತಿಗೆಡದೆ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ಧೈರ್ಯವನ್ನು ಸಚಿವರು ಶ್ಲಾಘಿಸಿದರು. ಶಿವಾಜಿನಗರದ ಫುಟ್‌ಪಾತ್ ಒತ್ತುವರಿಯಿಂದಾಗಿ ಸಾರ್ವಜನಿಕರಿಗೆ ಹಾಗೂ ಬಸ್ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿತ್ತು. ಈ ವರದಿ ಬಿತ್ತರಗೊಂಡ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಜುಲೈ 21ರಂದು ಜೆಸಿಬಿ ಯಂತ್ರಗಳೊಂದಿಗೆ ತೆರವು ಕಾರ್ಯಾಚರಣೆಗೆ ಇಳಿದಿದ್ದರು.

ಈ ವೇಳೆ ಅಧಿಕಾರಿಗಳ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿದ್ದು, ಈ ಘಟನೆ ರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲೂ ಸದ್ದು ಮಾಡಿತ್ತು. ಘಟನೆಗೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, 11 ಮಂದಿಯನ್ನು ಬಂಧಿಸಲಾಗಿತ್ತು. ಹಲ್ಲೆಯ ನಡುವೆಯೂ ಪಟ್ಟು ಬಿಡದ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆಯನ್ನು ಮುಂದುವರಿಸಿದ್ದರು. ಜುಲೈ 22ರ ಹೊತ್ತಿಗೆ ಇಡೀ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಈ ಇಡೀ ಕಾರ್ಯಾಚರಣೆಯಲ್ಲಿ ಸಚಿವ ಕೃಷ್ಣ ಬೈರೇಗೌಡ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಅಭಿವೃದ್ಧಿ ಆಯುಕ್ತ ವೆಂಕಟಾಚಲಪತಿ ಅವರು ಅಧಿಕಾರಿಗಳ ಬೆನ್ನಿಗೆ ನಿಂತು ಸಂಪೂರ್ಣ ಬೆಂಬಲ ನೀಡಿದ್ದರು.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಆತಿಫ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಾಧವರಾವ್, ಸಾವಿತ್ರಿ, ಸಹಾಯಕ ಅಭಿಯಂತರರಾದ ರುಚಿತಾ, ಅಭಿಯಂತರ ಗೌತಮ್ ಹಾಗೂ ಜೆಸಿಬಿ ಚಾಲಕನ ಪ್ರತಿನಿಧಿಯನ್ನು ಸನ್ಮಾನಿಸಲಾಯಿತು. ಸರ್ಕಾರ ರೂಪಿಸುವ ಯೋಜನೆಗಳು ಜನರಿಗೆ ತಲುಪಲು ನಿಷ್ಠಾವಂತ ಅಧಿಕಾರಿಗಳೇ ಅಡಿಪಾಯ. ಜೀವ ಬೆದರಿಕೆಗೂ ಹೆದರದೆ ಸಾರ್ವಜನಿಕರ ಹಿತಕ್ಕಾಗಿ ಶ್ರಮಿಸಿದ ಈ ಅಧಿಕಾರಿಗಳೇ ನಮ್ಮ ಇಲಾಖೆ ಹಾಗೂ ಸರ್ಕಾರಕ್ಕೆ ನಿಜವಾದ ಶಕ್ತಿ ಎಂದು ಸಚಿವ ಕೃಷ್ಣ ಬೈರೇ ಗೌಡ ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.