ಬೆಂಗಳೂರು: ರಾಜ್ಯದ ಐಟಿ ಮತ್ತು ಟೆಕ್ ರಂಗಕ್ಕೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಹಾಗೂ ರೋಬಾಟಿಕ್ಸ್ ಇನ್ನೋವೇಷನ್ ಝೋನ್ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಬೆಂಗಳೂರು ಟೆಕ್ ಸಮಿಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ತಂತ್ರಜ್ಞಾನ ನೀತಿ ಮತ್ತು ಮೂಲಸೌಕರ್ಯ ವಿಸ್ತರಣೆಯ ಕುರಿತು ಸರ್ಕಾರದ ಬದ್ಧತೆಯನ್ನು ವ್ಯಕ್ತಪಡಿಸಿದರು. ರಾಜ್ಯದ ಸಾಫ್ಟ್‌ವೇರ್ ರಫ್ತು ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, 2024-25ನೇ ಸಾಲಿನಲ್ಲಿ 4.36 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ರಫ್ತು ಮೌಲ್ಯ, ಈ ವರ್ಷ 5.50 ಲಕ್ಷ ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು. ಮುಂಬೈನಲ್ಲಿ ಉದ್ಯಮ ಸ್ಥಾಪಿಸಲು ಪ್ರತಿ ಚದರ ಅಡಿಗೆ 3.5 ಡಾಲರ್ ವೆಚ್ಚವಾದರೆ, ಕರ್ನಾಟಕದಲ್ಲಿ ಕೇವಲ 1 ಡಾಲರ್ ವೆಚ್ಚವಾಗುತ್ತದೆ. '
ಬಿಯಾಂಡ್ ಬೆಂಗಳೂರು' ಯೋಜನೆಯ ಮೂಲಕ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೆ ಉದ್ಯಮಗಳನ್ನು ವಿಸ್ತರಿಸಿ, ಈ ವೆಚ್ಚವನ್ನು ಅರ್ಧ ಡಾಲರ್‌ಗೆ ಇಳಿಸುವ ಸಂಕಲ್ಪ ತೊಡಲಾಗಿದೆ ಎಂದರು. ಇದಕ್ಕಾಗಿ ಹುಬ್ಬಳ್ಳಿ, ಧಾರವಾಡ ಮತ್ತು ಮೈಸೂರಿನಂತಹ ನಗರಗಳಲ್ಲಿ ಎರಡುಪಟ್ಟು ಹೆಚ್ಚುವರಿ ಎಫ್‌ಎಆರ್ (FAR) ನೀಡಲು ಸರ್ಕಾರ ತೀರ್ಮಾನಿಸಿದೆ. ಈ ನಗರಗಳಲ್ಲೂ ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಬೆಂಬಲವನ್ನು ಸರ್ಕಾರ ಒದಗಿಸಲಿದೆ. ಬೆಂಗಳೂರಿನಲ್ಲಿ ಲಭ್ಯವಿರುವ ಅತ್ಯುತ್ತಮ ಮಾನವ ಸಂಪನ್ಮೂಲ ಮತ್ತು ಪ್ರತಿಭೆ ಜಗತ್ತಿನ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಹೀಗಾಗಿ, ಡೀಪ್ ಟೆಕ್ ಹಾಗೂ ಕ್ವಾಂಟಮ್ ತಂತ್ರಜ್ಞಾನ ಆಧಾರಿತ ಹೊಸ ಐಟಿ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಡಿಕೆಶಿ ವಿವರಿಸಿದರು.
ಶಿಕ್ಷಣ ವ್ಯವಸ್ಥೆಯಲ್ಲೂ ಎಐ ಕ್ರಾಂತಿ ತಂತ್ರಜ್ಞಾನ ಬೆಳೆದಂತೆ ಶಿಕ್ಷಣ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ ತರಲಾಗುತ್ತಿದ್ದು, 6ನೇ ತರಗತಿಯಿಂದಲೇ ಮಕ್ಕಳಿಗೆ 'ಎಐ' (AI) ಪಠ್ಯಕ್ರಮದ ಭಾಗವಾಗಲಿದೆ. ರಾಜ್ಯ ಸರ್ಕಾರದಿಂದ ಪ್ರತ್ಯೇಕ ಎಐ ವಿಶ್ವವಿದ್ಯಾಲಯ, 'ಬೆಂಗಳೂರು ರೋಬಾಟಿಕ್ಸ್ ಅಂಡ್ ಎಐ ಇನ್ನೋವೇಷನ್ ಝೋನ್' ಹಾಗೂ ಎಐ ಸಿಟಿಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ, 2026-2031ರ ಅವಧಿಗೆ ಸುಸ್ಥಿರ ಡೇಟಾ ಸೆಂಟರ್ ನೀತಿಯನ್ನೂ ಸಿದ್ಧಪಡಿಸಲಾಗುತ್ತಿದೆ. ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ತಲುಪಿಸಲು ಶ್ರಮಿಸುತ್ತಿರುವ ಸರ್ಕಾರಕ್ಕೆ ಕಂಪನಿಗಳು ತಮ್ಮ ಸಿಎಸ್‌ಆರ್ (CSR) ನಿಧಿಯ ಮೂಲಕ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ನವೆಂಬರ್ 17ರಿಂದ 19ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಜಾಗತಿಕ ಹೂಡಿಕೆದಾರರು ಮತ್ತು ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಿಎಂ ಆಹ್ವಾನ ನೀಡಿದರು.