ಬೆಂಗಳೂರು: ಇವತ್ತು ನಮ್ಮ ಬೆಂಗಳೂರಿನ ಜಿಬಿಎ ಚುನಾವಣೆಗೆ ಸಂಬಂಧಿಸಿ ಸಭೆ ನಡೆಸಲಾಗಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಕಾಂಗ್ರೆಸ್ ಸರಕಾರವು ಬೆಂಗಳೂರಿಗೆ ಮಾಡಿದ ಅನ್ಯಾಯ, ಯಾವುದೇ ಕೆಲಸ ಕಾರ್ಯ ಮಾಡದೇ, ಯಾವುದೇ ಯೋಜನೆ ಜಾರಿಗೊಳಿಸದೇ, ಸಾಕಷ್ಟು ತೆರಿಗೆಗಳನ್ನು ಹಾಕಿದೆ. ಕಾಂಗ್ರೆಸ್ ಸರಕಾರಕ್ಕೆ ಜಿಬಿಎ ಚುನಾವಣೆಯಲ್ಲಿ ಮುಖಭಂಗ ಮಾಡಲು ತೀರ್ಮಾನವನ್ನು ತಿಳಿಸಿದ್ದಾಗಿ ಹೇಳಿದರು.
ಉಸ್ತುವಾರಿಗಳಾಗಿರುವ ಸಂಘಟನಾ ಚತುರರಾದ ರಾಮ್ ಮಾಧವ್ ಅವರ ಜೊತೆಗೆ ಸಹ-ಉಸ್ತುವಾರಿಗಳಾದ ಸತೀಶ್ ಪೂನಿಯಾ, ಸಂಜಯ್ ಉಪಾಧ್ಯಾಯ ಅವರು ಪಾಲ್ಗೊಂಡಿದ್ದಾಗಿ ತಿಳಿಸಿದರು. 5 ಜಿಬಿಎಗಳಲ್ಲಿ ಗೆಲ್ಲುವ ಕುರಿತು ನಾವು (ಶಾಸಕರು, ಸಂಸದರು) ಸಲಹೆ ಕೊಟ್ಟಿದ್ದೇವೆ. ಹಿರಿಯರೂ ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಚುನಾವಣೆ ಗೆಲ್ಲಲು ಮಾಡಬೇಕಾದ ಕಾರ್ಯತಂತ್ರದ ಬಗ್ಗೆ ಅಂತಿಮವಾಗಿ ಮೀಸಲಾತಿ ಪ್ರಕಟವಾದ ಬಳಿಕ ಮಾಡಲು ತೀರ್ಮಾನಿಸಿದ್ದಾಗಿ ವಿವರಿಸಿದರು. ಇದನ್ನು ತುಂಬ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ವಿವರ ನೀಡಿದರು.