ಗಂಗಾವತಿ: ಒಂದು ವರ್ಷದ ಹಿಂದೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ ವಿದೇಶಿ ಮಹಿಳೆ ಹಾಗೂ ಸ್ಥಳೀಯ ಹೋಂ ಸ್ಟೇ ಮಾಲೀಕರ ಮೇಲೆ ಅತ್ಯಾಚಾರ ನಡೆಸಿದ ಮೂವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಇಬ್ಬರ ಮೇಲೆ ಅತ್ಯಾಚಾರ ನಡೆಸಿದ್ದರ ಜತೆಗೆ ಒಡಿಶಾದ ಪ್ರವಾಸಿಗರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಲಯವು ಮೂವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಗಂಗಾವತಿಯ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿ (ಚೈತನ್ಯಸಾಯಿ) ಹಾಗೂ ಶರಣಪ್ಪ (ಶರಣು ಬಸವರಾಜ್) ಮರಣ ದಂಡನೆ ಶಿಕ್ಷೆಗೆ ಒಳಗಾದ ಅಪರಾಧಿಗಳು.
2025ರ ಮಾರ್ಚ್ ತಿಂಗಳಲ್ಲಿ ಮಾರ್ಚ್ ನಲ್ಲಿ ಇಸ್ರೇಲಿ ಮಹಿಳೆಯೊಬ್ಬರು ಸಾಣಾಪುರಕ್ಕೆ ಪ್ರವಾಸಕ್ಕೆ ಬಂದಿದ್ದರು. ಒಡಿಶಾದಿಂದ ಬಿಬಾಶ್ ಎನ್ನುವ ಯುವಕನೂ ಪ್ರವಾಸಕ್ಕೆ ಬಂದಿದ್ದ. ಇವರಿಬ್ಬರು ಮತ್ತು ಇತರೆ ಪ್ರವಾಸಿಗರನ್ನು ಸ್ಥಳೀಯ ಹೊಂ ಸ್ಟೇ ಒಡತಿ ಕರೆದುಕೊಂಡು ಸಾಣಾಪುರದಲ್ಲಿ ಕಾಲುವೆ ಪಕ್ಕದಲ್ಲಿ ಬೆಳದಿಂಗಳ ಸೌಂದರ್ಯ ನೋಡಲು ಕರೆದುಕೊಂಡು ಮಧ್ಯರಾತ್ರಿ ಬಂದಿದ್ದರು. ಆಗ ಪಾನಮತ್ತರಾಗಿ ಇದೇ ಮಾರ್ಗದಲ್ಲಿ ಬಂದಿದ್ದ ಅಪರಾಧಿಗಳು ಇಸ್ರೇಲಿ ಮಹಿಳೆ, ಹೊಂಸ್ಟೇ ಒಡತಿ ಮೇಲೆ ಅತ್ಯಾಚಾರ ಎಸಗಿದ್ದರು.
ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣ ನಡೆದ ಕೇವಲ 9 ತಿಂಗಳಲ್ಲೇ ಗಂಗಾವತಿ ನ್ಯಾಯಾಲಯದ ನ್ಯಾಯಮೂರ್ತಿ ಸದಾನಂದ ನಾಗಪ್ಪ ನಾಯಕ್ ಅವರು ತೀರ್ಪು ಪ್ರಕಟಿಸಿದ್ದಾರೆ.