2026-03-07 06:36:29

Ganga Kalyan Yojana | ಗಂಗಾ ಕಲ್ಯಾಣ ಯೋಜನೆ ಕೊಳವೆ ಬಾವಿಗೆ ಸಲ್ಲಿಸಿದ್ದ ಅರ್ಜಿಯ ವಿವರ ನಿಮ್ಮ ಅಂಗೈನಲ್ಲೈ ಲಭ್ಯ ಸಚಿವ ಕೆ ಜೆ ಜಾರ್ಜ್ | Speed News kannada

Ganga Kalyan Yojana | ಗಂಗಾ ಕಲ್ಯಾಣ ಯೋಜನೆ ಕೊಳವೆ ಬಾವಿಗೆ ಸಲ್ಲಿಸಿದ್ದ ಅರ್ಜಿಯ ವಿವರ ನಿಮ್ಮ ಅಂಗೈನಲ್ಲೈ ಲಭ್ಯ ಸಚಿವ ಕೆ ಜೆ ಜಾರ್ಜ್ | Speed News kannada

ಬೆಂಗಳೂರು: ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ  ಟ್ರ್ಯಾಕ್ ಮಾಡಲು ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ ಕಲ್ಪಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಪೋರ್ಟಲ್‌ನ ಹೊಸ ಆಯ್ಕೆಯನ್ನು ಅನಾವರಣಗೊಳಿಸಿದ ಬಳಿಕ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು, "ಯೋಜನೆಯಲ್ಲಿ ಪಾರದರ್ಶಕತೆ, ಸಾರ್ವಜನಿಕರಿಗೆ ಸುಲಭ ಮಾಹಿತಿ ಒದಗಿಸಲು ಈ ಹೊಸ ಆಯ್ಕೆಯನ್ನು ಪರಿಚಯಿಸಲಾಗಿದೆ," ಎಂದು ತಿಳಿಸಿದರು.
"ಕರ್ನಾಟಕ ಸರ್ಕಾರದ  ಪ್ರಮುಖ ನೀರಾವರಿ ಯೋಜನೆಯಾದ 'ಗಂಗಾ ಕಲ್ಯಾಣ' ಅಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಸಣ್ಣ/ಅತಿ ಸಣ್ಣ ರೈತರ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿ, ಪಂಪ್‌ಸೆಟ್ ಅಳವಡಿಸಿ, ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಕೊಳವೆ ಬಾವಿ ಕೊರೆದ ನಂತರ ವಿದ್ಯುತ್‌ ಮೂಲಸೌಕರ್ಯ ಕಲ್ಪಿಸುವ ಸಂದರ್ಭದಲ್ಲಿ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು  ಸಾಧ್ಯವಾಗುತ್ತಿರಲಿಲ್ಲ. ಈಗ ಪೋರ್ಟಲ್‌ ಅಲ್ಲೇ ಮಾಹಿತಿ ತಿಳಿಯಲು ಅವಕಾಶ ಕಲ್ಪಿಸಲಾಗಿದೆ. ರೈತ ಬಂಧುಗಳು ಈ ಸೇವೆಯ ಸದುಪಯೋಗ ಪಡೆಯಬೇಕು", ಎಂದು ಸಚಿವರು ಹೇಳಿದರು.
"ಈ ವೈಶಿಷ್ಟ್ಯವು ಗಂಗಾ ಕಲ್ಯಾಣ ಯೋಜನೆಯ ಪೋರ್ಟಲ್‌ನಲ್ಲಿ ಲಭ್ಯವಿದ್ದು, ಮುಖಪುಟದಲ್ಲಿ ಒದಗಿಸಲಾದ 'ಟ್ರ್ಯಾಕ್ ಅಪ್ಲಿಕೇಶನ್' ಆಯ್ಕೆಯನ್ನು ಕ್ಲಿಕ್ ಮಾಡಿ ಪೂರಕ ವಿವರ ದಾಖಲಿಸಿದರೆ, ಫಲಾನುಭವಿಗಳು ತಮ್ಮ ಅರ್ಜಿಯ ಮಾಹಿತಿ ಪಡೆಯಬಹುದಾಗಿದೆ," ಎಂದು ಹೇಳಿದರು.
ಪ್ರಮುಖ ವೈಶಿಷ್ಟ್ಯಗಳು:
ಅರ್ಜಿದಾರರು/ರೈತರು ಕಚೇರಿಗಳಿಗೆ ಭೇಟಿ ನೀಡದೆಯೇ ವಿದ್ಯುತ್‌ ಮೂಲ ಸೌಕರ್ಯ ಕಲ್ಪಿಸುವ ಪ್ರಕ್ರಿಯೆ ಯಾವ ಹಂತದಲ್ಲಿದೆ  ಎಂಬುದನ್ನು ತಿಳಿದುಕೊಳ್ಳಬಹುದು. ಫಲಾನುಭವಿಗಳು ಗಂಗಾ ಕಲ್ಯಾಣ ಅರ್ಜಿ ಐಡಿ, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಪೈಕಿ ಯಾವುದಾದರೂ ಒಂದನ್ನು ನಮೂದಿಸಿದರೆ ಸಾಕು. ಕ್ಯಾಪ್ಚಾ ದೃಢೀಕರಣವು ಸುರಕ್ಷಿತ ಪ್ರವೇಶವನ್ನು ಖಚಿತಪಡಿಸುತ್ತದೆ.
ಅರ್ಜಿದಾರರು ಈ ಮಾಹಿತಿ ದಾಖಲಿಸಿದ  ನಂತರ  ಅರ್ಜಿದಾರರ ವಿವರಗಳು, ಅರ್ಜಿ ಹಂತವಾರು ಪ್ರಗತಿ, ಸ್ಥಿತಿ (ಪೂರ್ಣಗೊಂಡಿದೆ/ ಪ್ರಗತಿಯಲ್ಲಿದೆ), ಪ್ರಕ್ರಿಯೆಯ ದಿನಾಂಕ ಹಾಗೂ ಆದೇಶ ಸಂಖ್ಯೆಯ ವಿವರಗಳು ಲಭ್ಯವಾಗುತ್ತದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ ಮಾತನಾಡಿ, "ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲು ಪೋರ್ಟಲ್ ನಲ್ಲಿ ಹೊಸ ಆಯ್ಕೆ ಒದಗಿಸಲಾಗಿದೆ. ಇದರಿಂದ ಕಚೇರಿಗೆ ಅಲೆದಾಡುವುದು ತಪ್ಪುವುದರ ಜತೆಗೆ ಕಾಲಕಾಲಕ್ಕೆ ಅವರಿಗೆ ತಮ್ಮ ಅರ್ಜಿಯ ಮಾಹಿತಿ ಲಭ್ಯವಾಗುತ್ತದೆ" ಎಂದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.