ಬೆಂಗಳೂರು: ಜನರ ಕೆಂಗಣ್ಣಿಗೆ ಗುರಿಯಾಗಿ ಮುಜುಗರಕ್ಕೀಡಾಗುವ ಪರಿಸ್ಥಿತಿ ಬಂದಾಗಲೆಲ್ಲ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರನ್ನು ದಿಕ್ಕು ತಪ್ಪಿಸುವ ಚಾಳಿಯನ್ನು ಸಿದ್ದರಾಮಯ್ಯ ಅವರು ಈ ಬಜೆಟ್‌ನಲ್ಲೂ ಮುಂದುವರೆಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಬಜೆಟ್ ಅನ್ನು ಟೀಕಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಸಾಲದ ಪ್ರಮಾಣವೇ ಅದರ ಆರ್ಥಿಕ ನಿರ್ವಹಣೆಯ ನಿಜ ಮುಖವನ್ನು ಬಯಲಿಗೆಳೆಯುತ್ತದೆ. 2023–24ರಲ್ಲಿ ಸುಮಾರು ₹82,000 ಕೋಟಿ, 2024–25ರಲ್ಲಿ ₹1.05 ಲಕ್ಷ ಕೋಟಿ, 2025–26ರಲ್ಲಿ ₹1.16 ಲಕ್ಷ ಕೋಟಿ, ಮತ್ತು ಈಗ 2026–27ರ ಬಜೆಟ್ ಅಂದಾಜಿನಲ್ಲಿ ₹1.32 ಲಕ್ಷ ಕೋಟಿ ಸಾಲ ಮಾಡಲು ಯೋಜನೆ ರೂಪಿಸಲಾಗಿದೆ. ಅಂದರೆ ಕೇವಲ ನಾಲ್ಕು ವರ್ಷಗಳಲ್ಲಿ ಈ ಸರ್ಕಾರವು ಸುಮಾರು ₹4.4 ಲಕ್ಷ ಕೋಟಿ ಹೊಸ ಸಾಲ ಮಾಡುವ ಪರಿಸ್ಥಿತಿ ಉಂಟುಮಾಡಿದೆ. ಇದು ಅಭಿವೃದ್ಧಿಗಾಗಿ ಮಾಡಿದ ಸಾಲವೇ? ಅಥವಾ ಚುನಾವಣಾ ಗ್ಯಾರಂಟಿಗಳಿಗಾಗಿ ರಾಜ್ಯದ ಭವಿಷ್ಯವನ್ನು ಗಿರವಿ ಇಟ್ಟ ಸಾಲವೇ ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಮೂಡಿದೆ.
2026–27ರಲ್ಲಿ ಕರ್ನಾಟಕದ ಒಟ್ಟು ರಾಜಸ್ವ ಆದಾಯ ಸುಮಾರು ₹3.15 ಲಕ್ಷ ಕೋಟಿ ಆಗಿದ್ದರೆ, ಕೇವಲ ಸಂಬಳ, ಪಿಂಚಣಿ ಮತ್ತು ಬಡ್ಡಿ ಪಾವತಿಗೆ ಹೋಗುತ್ತಿರುವ ಮೊತ್ತವೇ ಸುಮಾರು ₹2.77 ಲಕ್ಷ ಕೋಟಿ. ಅಂದರೆ ರಾಜ್ಯದ ಆದಾಯದ ಸುಮಾರು 88% ಕೇವಲ ಕಮಿಟೆಡ್ ವೆಚ್ಚಗಳಿಗೆ ಹೋಗುತ್ತಿದೆ. ಇದರ ಪರಿಣಾಮವಾಗಿ ಈ ವರ್ಷ ರಾಜಸ್ವ ಕೊರತೆ ₹22,957 ಕೋಟಿ, ಮತ್ತು ವಿತ್ತೀಯ ಕೊರತೆ ಸುಮಾರು ₹1,09,998 ಕೋಟಿ ತಲುಪಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣ ಮೀಸಲಿಡುವ ಬದಲು ಸಾಲದ ಬಲೆಗೆ ರಾಜ್ಯವನ್ನು ತಳ್ಳುತ್ತಿರುವುದು ಈ ಬಜೆಟ್‌ನ ಕಹಿ ಸತ್ಯ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಹಣಕಾಸಿನ ಶಿಸ್ತನ್ನು ಕಟ್ಟುನಿಟ್ಟಾಗಿ ಕಾಪಾಡಲಾಗಿತ್ತು. ರಾಜ್ಯದ ಸಾಲವು GSDP ಯ 25% ಒಳಗೆ ಇತ್ತು, ಫಿಸ್ಕಲ್ ಡೆಫಿಸಿಟ್ 3% ಒಳಗೆ ಇತ್ತು ಮತ್ತು ಹಲವಾರು ವರ್ಷಗಳಲ್ಲಿ ರಾಜಸ್ವ ಉಳಿಕೆ ಕೂಡ ಇತ್ತು. ಆದರೆ ಇಂದು ಸ್ಥಿತಿ ಸಂಪೂರ್ಣ ಬದಲಾಗಿದೆ. ಸಾಲ ಮಾಡಿ ಸಂಬಳ ಕೊಡುವ ಮಟ್ಟಕ್ಕೆ ರಾಜ್ಯವನ್ನು ತಳ್ಳಿರುವುದು ಈ ಸರ್ಕಾರದ ಆರ್ಥಿಕ ದುರಾಡಳಿತದ ಸ್ಪಷ್ಟ ಉದಾಹರಣೆ ಎಂದು ಹೇಳಿದ್ದಾರೆ.