2026-06-08 01:28:30

ತೈಲ ಬೆಲೆ ಏರಿಕೆ: ಪಿಎಂ ಮೋದಿ ಶ್ರೀಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ ಆಕ್ರೋಶ| Speed News Kannada

ತೈಲ ಬೆಲೆ ಏರಿಕೆ: ಪಿಎಂ ಮೋದಿ ಶ್ರೀಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ ಆಕ್ರೋಶ| Speed News Kannada

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಪೆಟ್ರೋಲ್ ಡೀಸೆಲ್ ಬೆಲೆ ಏರಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈ ಬಾರಿ ಹನ್ನೊಂದು ದಿನಗಳ ಅಂತರದಲ್ಲಿ ನಾಲ್ಕು ಬಾರಿ ಇಂಧನ ದರ ಏರಿಕೆ ಮಾಡಿ ದೇಶ ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳ ಏರಿಸಿದ್ದು, ದೇಶದ ಇತಿಹಾಸದಲ್ಲಿ ಹೀಗೆ ಏರಿಕೆಯಾಗಿದ್ದಿಲ್ಲ. ಜನಸಾಮಾನ್ಯರು, ಮದ್ಯಮ ವರ್ಗದ ಜನರ ಜೀವನ ದುಸ್ತರವಾಗಿದೆ. ಬೆಲೆಯೇರಿಕೆಯಿಂದ ಜನ ತತ್ತರಿಸಿದ್ದಾರೆ ಎಂದರು.

’ಅಚ್ಛೇ ದಿನ್’ ಎಂದು ಜನರಿಗೆ ಟೋಪಿ ಹಾಕಲಾಗುತ್ತಿದೆ:

ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್ ಮಾದರಿ ಸರ್ಕಾರ ಬರುತ್ತದೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿ ಜನರಿಗೆ ಟೋಪಿ ಹಾಕಿದ್ದಾರೆ.  ಕಳೆದ 11 ದಿನಗಳಿಂದ 4 ಬಾರಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110 .93 ರೂ.ಗಳಾಗಿವೆ. ಡೀಸೆಲ್ ದರ 98.89 ರೂ.ಗಳಾಗಿವೆ.  7. 52 ರೂ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರಧಾನಿ ಮೋದಿಯವರು ದೇಶವನ್ನು ಲೂಟಿ ಮಾಡುತ್ತಿರುವುದು ರುಜುವಾತಾಗುತ್ತಿದೆ ಎಂದರು.

ಕಚ್ಚಾತೈಲ ದರ ಕಡಿಮೆ ಇದ್ದರೂ ಗ್ರಾಹಕರಿಗೆ ಲಾಭ ಇಲ್ಲ:

ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 2014ರ ಮೇ ತಿಂಗಳಲ್ಲಿ  ಪ್ರತಿ ಲೀಟರ್‌ ಪೆಟ್ರೋಲ್‌ ಗೆ 71.41 ರೂ. ಮತ್ತು ಡೀಸೆಲ್ ರೂ.56.71 ಇತ್ತು. ಅಂದು 412 ರೂ. ಆಗಿದ್ದ ಗ್ಯಾಸ್ ಸಿಲಿಂಡರ್ ಬೆಲೆ, ಇಂದು 915 ರೂ. ಆಗಿದೆ. ಇದು ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೋಲಿಸಿದರೆ ಪ್ರಸ್ತುತ ಬೆಲೆ ಇಳಿದಿದ್ದರೂ ಕೂಡ, ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚುತ್ತಿದೆ. 65 ರಿಂದ 75 ಡಾಲರ್  ಬೆಲೆ ಇದ್ದಾಗ, ಈ ಕಡಿಮೆ ಬೆಲೆಯ ಲಾಭ, ಗ್ರಾಹಕರಿಗೆ ದೊರೆಯಲಿಲ್ಲ. ಪ್ರಸ್ತುತ ಕಚ್ಚಾ ತೈಲದ ಬೆಲೆ 100 ಡಾಲರ್ ಮಿತಿಯೊಳಗಿದ್ದರೂ, ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಸತತ ನಾಲ್ಕು ಬಾರಿ ಏರಿಕೆ ಮಾಡಿದೆ. ಇದರಿಂದಾಗಿ  ಗ್ರಾಹಕರಿಗೆ, ರೈತರಿಗೆ, ಜನಸಾಮಾನ್ಯರಿಗೆ ಈ ಬೆಲೆಏರಿಕೆಯ ಬಿಸಿ ತಟ್ಟಲಿದೆ. ಮೋದಿಯವರು ದೇಶವನ್ನು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ದಿನೇಶ್ ಗುಂಡೂರಾವ್, ಅಭಿಷೇಕ್ ದತ್ತಾ ಮೊದಲಾದವರು ಉಪಸ್ಥಿತರಿದ್ದರು.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.