ಬೆಂಗಳೂರು : ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಸೋದರ ಅಳಿಯ ಅನಿರುದ್ ರಮೇಶ್ ಕಳೆದ ಹತ್ತು ದಿನಗಳಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಸಹಾಯ ಕೋರಿದ್ದಾರೆ. ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರ ಸಂಬಂಧಿ ಅನಿರುದ್, ದಕ್ಷಿಣ ಬೆಂಗಳೂರಿನ ಖ್ಯಾತ ಕಾಲೇಜಿನಲ್ಲಿ ಮನೋವಿಜ್ಞಾನ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಲ್ಲೆಡೆ ಶೋಧ ನಡೆಸಿದರೂ ಯಾವುದೇ ಸುಳಿವು ಸಿಗದ ಕಾರಣ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಫೆಬ್ರವರಿ 15ರಂದು ಅನಿರುದ್ ನಾಪತ್ತೆಯಾಗಿದ್ದು, ಹನುಮಂತನಗರ ನಿವಾಸಿ ಎಂದು ತಿಳಿಸಿದ್ದಾರೆ. 32 ವರ್ಷದ, 6 ಅಡಿ 2 ಇಂಚು ಎತ್ತರದ, ಶಾಂತ ಸ್ವಭಾವದ ವ್ಯಕ್ತಿ ಎಂದು ವಿವರ ನೀಡಿದ್ದಾರೆ. 2019-20ರಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ನಂತರ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶಿಸಿದ್ದಾರೆ. ಅವರು ಮೊದಲು ಆಮ್ ಆದ್ಮ ಪಾರ್ಟಿ ಸೇರಿ ಬಳಿಕ ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರಿಯರಾಗಿದ್ದಾರೆ.