2026-03-07 04:59:20

Fireworks factory explosion in Andhra Pradesh | ಆಂಧ್ರಪ್ರದೇಶದಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ 18 ಕಾರ್ಮಿಕರ ಸಾವು | Speed News Kannada

Fireworks factory explosion in Andhra Pradesh | ಆಂಧ್ರಪ್ರದೇಶದಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ 18 ಕಾರ್ಮಿಕರ ಸಾವು | Speed News Kannada

ಕಾಕಿನಾಡ: ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 18 ಕಾರ್ಮಿಕರು ಮೃತಪಟ್ಟಿದ್ದಾರೆ. ಅಲ್ಲದೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಕಿನಾಡ ಜಿಲ್ಲೆಯ ಸಾಮರ್ಲಕೋಟ ಮಂಡಲದ ವೆಟ್ಲಪಾಲಂ-ಜಿ. ಮೇಡುಪಾಡು ನಡುವೆ ಇರುವ ಪಟಾಕಿ ತಯಾರಿಕಾ ಘಟಕದಲ್ಲಿ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಕಾರ್ಮಿಕರ ಮೃತದೇಹಗಳು ನೂರಾರು ಅಡಿ ದೂರದ ಹೊಲಗದ್ದೆಗಳಿಗೆ ಹಾರಿಬಿದ್ದಿವೆ.
ಪಟಾಕಿ ತಯಾರಿಕಾ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಸ್ಫೋಟಗೊಂಡ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಾರ್ಖಾನೆಯನ್ನು ಆವರಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಅದರಲ್ಲೂ ಮಹಿಳೆಯರೇ ಹೆಚ್ಚು ಎಂದು ತಿಳಿದು ಬಂದಿದೆ.
ಈ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ದುರಂತ ಸಂಭವಿಸಿದಾಗ ಕಾರ್ಖಾನೆಯಲ್ಲಿ 30 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತದ ಹಿಂದಿನ ಕಾರಣಗಳನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಿದ್ದಾರೆ. 
ತನ್ನ ಸಾಮರ್ಥ್ಯವನ್ನು ಮೀರಿ ಹೆಚ್ಚಿನ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿ ಪಟಾಕಿ ತಯಾರಿಸುತ್ತಿದ್ದದ್ದೇ ಈ ಭೀಕರ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.