2026-03-07 07:28:58

FIR Against Social Media Posts | ಸೋಶಿಯಲ್‌ ಮೀಡಿಯಾ ಪೋಸ್ಟ್‌ ಗಳ ವಿರುದ್ಧ ಎಫ್‌ ಐಆರ್ ಹೊಸ ಮಾರ್ಗಸೂಚಿ ಪ್ರಕಟ | Speed News Kannada

FIR Against Social Media Posts | ಸೋಶಿಯಲ್‌ ಮೀಡಿಯಾ ಪೋಸ್ಟ್‌ ಗಳ ವಿರುದ್ಧ ಎಫ್‌ ಐಆರ್ ಹೊಸ ಮಾರ್ಗಸೂಚಿ ಪ್ರಕಟ | Speed News Kannada

ಬೆಂಗಳೂರು: ಸುಪ್ರೀಂಕೋರ್ಟ್ ನೀಡಿರುವ  ತೀರ್ಪಿನ ಅಧಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ ಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವುದು ಮತ್ತು ಆರೋಪಿಗಳನ್ನು ಬಂಧಿಸುವ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಪೋಸ್ಟ್‌ಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸದೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದ್ದು, ಇದನ್ನು ತಡೆಯಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ದೂರುದಾರರ ಅರ್ಹತೆ ಪರಿಶೀಲನೆ: ಮಾನಹಾನಿ ಅಥವಾ ಅಂತಹುದೇ ಪ್ರಕರಣಗಳಲ್ಲಿ ದೂರು ನೀಡುವ ವ್ಯಕ್ತಿ ಕಾನೂನಿನ ಪ್ರಕಾರ ‘ನೊಂದ ವ್ಯಕ್ತಿ’ ಆಗಿರಬೇಕು. ಸಂಬಂಧವಿಲ್ಲದ ಮೂರನೇ ವ್ಯಕ್ತಿ ನೀಡುವ ದೂರುಗಳನ್ನು (ಗಂಭೀರ ಅಪರಾಧಗಳನ್ನು ಹೊರತುಪಡಿಸಿ) ಸ್ವೀಕರಿಸುವಂತಿಲ್ಲ. 
ಪ್ರಾಥಮಿಕ ವಿಚಾರಣೆ ಕಡ್ಡಾಯ:ದೂರಿನಲ್ಲಿ ಉಲ್ಲೇಖಿಸಲಾದ ವಿಷಯವು ಮೇಲ್ನೋಟಕ್ಕೆ ಅಪರಾಧವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಫ್‌ಐಆರ್ ದಾಖಲಿಸುವ ಮುನ್ನ ಕಡ್ಡಾಯವಾಗಿ ಪ್ರಾಥಮಿಕ ವಿಚಾರಣೆ ನಡೆಸಬೇಕು.
ಹಿಂಸಾಚಾರಕ್ಕೆ ಪ್ರಚೋದನೆ ಇದ್ದರೆ ಮಾತ್ರ ಪ್ರಕರಣ: ದ್ವೇಷ ಬಿತ್ತುವುದು, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದು ಅಥವಾ ದೇಶದ್ರೋಹದಂತಹ ಆರೋಪಗಳು ಕೇಳಿ ಬಂದಾಗ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಸ್ಪಷ್ಟ ಸಾಕ್ಷ್ಯಗಳಿದ್ದರೆ ಮಾತ್ರ ಪ್ರಕರಣ ದಾಖಲಿಸಬೇಕು. 
ರಾಜಕೀಯ ಟೀಕೆಗಳಿಗೆ ರಕ್ಷಣೆ:ಕಟುವಾದ ಅಥವಾ ಆಕ್ಷೇಪಾರ್ಹ ರಾಜಕೀಯ ಭಾಷಣ/ಪೋಸ್ಟ್‌ಗಳಿಗೆ ಯಾಂತ್ರಿಕವಾಗಿ ಪ್ರಕರಣ ದಾಖಲಿಸುವಂತಿಲ್ಲ. ಸಂವಿಧಾನದ 19(1)(ಎ) ಅಡಿಯಲ್ಲಿರುವ ವಾಕ್ ಸ್ವಾತಂತ್ರ್ಯವನ್ನು ಗೌರವಿಸಬೇಕು. 
ಮಾನಹಾನಿ ಅಸಂಜ್ಞೇಯ ಅಪರಾಧ:ಮಾನಹಾನಿಯು ‘ಅಸಂಜ್ಞೇಯ ಅಪರಾಧ’ ಆಗಿರುವುದರಿಂದ ಪೊಲೀಸರು ನೇರವಾಗಿ ಎಫ್‌ಐಆರ್ ದಾಖಲಿಸುವಂತಿಲ್ಲ. ದೂರುದಾರರಿಗೆ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್) ಮೊರೆ ಹೋಗಲು ಸೂಚಿಸಬೇಕು.
ಬಂಧನದ ನಿಯಮಗಳು:ಸುಪ್ರೀಂ ಕೋರ್ಟ್‌ನ ಅರ್ನೇಶ್ ಕುಮಾರ್ ಪ್ರಕರಣದ ಮಾರ್ಗಸೂಚಿಯಂತೆ, ಅನಗತ್ಯವಾಗಿ ಅಥವಾ ಯಾಂತ್ರಿಕವಾಗಿ ಯಾರನ್ನೂ ಬಂಧಿಸುವಂತಿಲ್ಲ. ಕಾನೂನು ಸಲಹೆ ಪಡೆಯಬೇಕು :ರಾಜಕೀಯ ಪೋಸ್ಟ್‌ಗಳು ಅಥವಾ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವ ಮುನ್ನ ಸರ್ಕಾರಿ ಅಭಿಯೋಜಕರಿಂದ ಕಾನೂನು ಸಲಹೆ ಪಡೆಯುವುದು ಕಡ್ಡಾಯ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.