2026-06-08 04:08:18

Fierce clashes between Pakistan and Israel amid peace talks|ಶಾಂತಿ ಮಾತುಕತೆ ಮಧ್ಯೆ ಪಾಕ್‌ ಮತ್ತು ಇಸ್ರೇಲ್‌ ಮಧ್ಯೆ ಭಯಂಕರ ಕಿತ್ತಾಟ|Speed News Kannada

Fierce clashes between Pakistan and Israel amid peace talks|ಶಾಂತಿ ಮಾತುಕತೆ ಮಧ್ಯೆ ಪಾಕ್‌ ಮತ್ತು ಇಸ್ರೇಲ್‌ ಮಧ್ಯೆ ಭಯಂಕರ ಕಿತ್ತಾಟ|Speed News Kannada

ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮಕ್ಕಾಗಿ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧವಾಗುತ್ತಿರುವ ಬೆನ್ನಲ್ಲೇ, ಪಾಕಿಸ್ತಾನ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಘರ್ಷ ತಾರಕಕ್ಕೇರಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇಸ್ರೇಲ್ ಅನ್ನು "ಕ್ಯಾನ್ಸರ್ ಕಾರಕ ದೇಶ" ಮತ್ತು "ಮಾನವೀಯತೆಗೆ ಶಾಪ" ಎಂದು ಕರೆಯುವ ಮೂಲಕ ಕಿಡಿಕಾರಿದ್ದಾರೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ಜನಾಂಗೀಯ ಹತ್ಯೆ ಎಂದು ಬಣ್ಣಿಸಿದ ಅವರು, ಯುರೋಪಿನ ಯಹೂದಿಗಳಿಂದ ಮುಕ್ತಿ ಪಡೆಯಲು ಪ್ಯಾಲೆಸ್ಟೈನ್ ಭೂಮಿಯಲ್ಲಿ ಈ ಪರಿಸ್ಥಿತಿಯನ್ನು ಸೃಷ್ಟಿಸಿದವರು ನರಕಕ್ಕೆ ಹೋಗಲಿ ಎಂದು ಶಪಿಸಿದ್ದಾರೆ.

ಸಚಿವ ಆಸಿಫ್ ಅವರ ಈ ಕಟು ಹೇಳಿಕೆಗಳು ಇಸ್ರೇಲ್ ಅನ್ನು ಕೆರಳಿಸಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಮತ್ತು ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗಳನ್ನು ಅಸಭ್ಯ, ಅಪಮಾನಕಾರಿ ಮತ್ತು ಯಹೂದಿ ವಿರೋಧಿ (Anti-semitic) ಎಂದು ಟೀಕಿಸಿರುವ ಇಸ್ರೇಲ್, ಶಾಂತಿ ಮಾತುಕತೆಯಲ್ಲಿ ಸಂಧಾನಕಾರನ ಪಾತ್ರ ವಹಿಸಲು ಬಯಸುವ ದೇಶದ ಜವಾಬ್ದಾರಿಯುತ ಸಚಿವರು ಇಂತಹ ಭಾಷೆ ಬಳಸುವುದು ಸರಿಯಲ್ಲ ಎಂದು ಆಕ್ಷೇಪಿಸಿದೆ. ಗಾಜಾದ ನಂತರ ಈಗ ಇರಾನ್ ಮತ್ತು ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿರುವುದು ರಕ್ತಪಾತಕ್ಕೆ ಕಾರಣವಾಗಿದೆ ಎಂಬುದು ಪಾಕಿಸ್ತಾನದ ವಾದವಾಗಿದೆ.

ಖವಾಜಾ ಆಸಿಫ್ ಅವರು ಈ ಹಿಂದೆಯೂ ಇಸ್ರೇಲ್ ವಿರುದ್ಧ ಹರಿಹಾಯ್ದಿದ್ದರು. ನೆತನ್ಯಾಹು ಅವರನ್ನು ಮಾನವಕುಲದ ಅತ್ಯಂತ ದೊಡ್ಡ ಅಪರಾಧಿ ಎಂದು ಕರೆದಿದ್ದ ಅವರು, ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಅವರನ್ನು ಒಪ್ಪಿಸಬೇಕೆಂದು ಆಗ್ರಹಿಸಿದ್ದರು. ಪ್ರಸ್ತುತ ಪಾಕಿಸ್ತಾನವು ಇರಾನ್ ಮತ್ತು ಅಮೆರಿಕ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿರುವ ಈ ನಿರ್ಣಾಯಕ ಸಮಯದಲ್ಲಿ, ಇಸ್ರೇಲ್ ಮತ್ತು ಪಾಕಿಸ್ತಾನದ ನಡುವಿನ ಈ ನೇರ ವಾಕ್ಸಮರವು ಮಧ್ಯಪ್ರಾಚ್ಯದ ಶಾಂತಿ ಪ್ರಕ್ರಿಯೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.