ಮುಂಬೈ: ಸಡಗರ ಸಂಭ್ರಮದಿಂದ ತುಳುಕಾಡುತ್ತಿದ್ದ ಮದುವೆಮನೆ ಕ್ಷಣಾರ್ಧದಲ್ಲಿ ಸೂತಕದ ಮನೆಯಾದರೆ ಅಲ್ಲಿ ನೆರೆದಿದ್ದವರ ಪರಿಸ್ಥಿತಿ ಹೇಗಿರಬೇಡ? ವಧು-ವರ ಪತ್ನಿ ಪುತ್ರರು ಮತ್ತು ಬಂಧುಮಿತ್ರರ ಕಣ್ಣಿರಕೋಡಿ ಹರಿಯದೆ ಇದ್ದೀತೇ?
ಮಹಾರಾಷ್ಟ್ರದ ಸಿಂಧ್‌ಖೇಡ್ ರಾಜಾ ತಾಲ್ಲೂಕಿನ ವರ್ದಾದಿಯಲ್ಲಿ ಕನ್ಯಾದಾನ ಮಾಡುತ್ತಿರುವಾಗಲೇ ವದುವಿನ ತಂದೆ ತೀವ್ರ ಹೃದಯಾಘಾತದಿಂದ ನಿಧನರಾದ ಸುದ್ದಿ ಹೊರಬಿದ್ದಿದೆ.
ವರ್ದಾದಿ ನಿವಾಸಿ ಕುರುಮದಾಸ್ ಭೂತೇಕರ್ ಅವರ ಪುತ್ರಿ ನಂದಿನಿ ಹಾಗೂ ಜಲ್ನಾ ಜಿಲ್ಲೆಯ ಮಾಂಥಾದ ಪ್ರದೀಪ್ ನಾನೋಟೆ ಅವರ ವಿವಾಹ ನಡೆಯುತ್ತಿತ್ತು. ಗುರುವಾರ ಸಂಜೆ ಮದುವೆ ವಿಧಿವಿಧಾನಗಳು ಆರಂಭವಾದವು. ಇಡೀ ಮನೆಯಲ್ಲಿ ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ಕುರುಮದಾಸ್ ತನ್ನ ಮಗಳ ಕೈಯನ್ನು ವರನ ಕೈಗೆ ಒಪ್ಪಿಸುತ್ತಿರುವಾಗ ಇದ್ದಕ್ಕಿದ್ದಂತೆ ಅವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತು. ಅಲ್ಲಿಯೇ ಕುಸಿದುಬಿದ್ದರು.
ಆರಂಭದಲ್ಲಿ ಒತ್ತಡ ಅಥವಾ ಆಯಾಸದಿಂದ ಅವರು ಮೂರ್ಛೆ ಹೋಗಿರಬಹುದು ಎಂದು ಭಾವಿಸಿದ್ದರು. ಕೂಡಲೇ ಸಂಬಂಧಿಕರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ಸಂತೋಷ ತುಂಬಿದ್ದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು.
ಮೃತ ಕುರುಮದಾಸ್ ಭೂಟೇಕರ್ ಅವರಿಗೆ ಡಿಸೆಂಬರ್‌ನಲ್ಲಿ ಅವರಿಗೆ ಬೈಪಾಸ್ ಸರ್ಜರಿ ನಡೆದಿತ್ತು. ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದರಾದರೂ ಮಗಳ ಮದುವೆಗೆ ತಾವೇ ಮುಂದೆ ನಿಂತು ತಯಾರಿ ನಡೆಸಿದ್ದರು.ಮಗಳನ್ನು ಸಂತೋಷದಿಂದ ಗಂಡನ ಮನೆಗೆ ಕಳುಹಿಸಬೇಕಾಗಿತ್ತು. ಆದರೆ ಅದೇ ಮನೆಯಿಂದ ಮೃತ ವಧುವಿನ ತಂದೆಯ ಅಂತ್ಯಕ್ರಿಯೆಯ ಮೆರವಣಿಗೆ ಹೊರಡುವಂತಾಯಿತು. ಇದು ಎಲ್ಲರ ಕಣ್ಣಾಲಿಗಳಲ್ಲಿ ನೀರು ತರಿಸಿತ್ತು.