ಬೆಳಗಾವಿ: ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ, ನಗ್ನ ವಿಡಿಯೋಗಳನ್ನು ಇಟ್ಟುಕೊಂಡು ಬ್ಯಾಕ್‌ಮೇಲ್ ಮಾಡುತ್ತಿದ್ದ ಪ್ರಕರಣ ಸಂಬಂಧ ಸ್ಪೋಟಕ ವಿಚಾರಗಳು ಬಹಿರಂಗವಾಗಿದೆ. ಬಂಧಿತ ನಕಲಿ ಪತ್ರಕರ್ತರ ಮೊಬೈಲ್‌ಗಳಲ್ಲಿ ನೂರಕ್ಕೂ ಹೆಚ್ಚು ಬೆತ್ತಲೆ ವಿಡಿಯೋಗಳು ಪತ್ತೆಯಾಗಿದೆ. ಪ್ರಕರಣ ಸಂಬಂಧ ಬಂಧಿತ ನಕಲಿ ಪತ್ರಕರ್ತರ ಮೊಬೈಲ್‌ಗಳನ್ನು ಪೊಲೀಸರು ಪರಿಶೀಲಿಸಿದಾಗ 100ಕ್ಕೂ ಹೆಚ್ಚು ಬೆತ್ತಲೆ ಹಾಗೂ ಖಾಸಗಿ ವಿಡಿಯೋಗಳು ಪತ್ತೆಯಾಗಿರುವುದು ಪತ್ತೆಯಾಗಿದೆ. ಈ ಗ್ಯಾಂಗ್ ಇನ್ನೂ ಹಲವಾರು ಅಧಿಕಾರಿಗಳನ್ನು ಕೂಡಾ ಟಾರ್ಗೆಟ್ ಮಾಡಿ ಲಕ್ಷಾಂತರ ರೂ. ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
ಈ ಮೊದಲು ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು 50 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಹಣ ಕೊಡದಿದ್ದರೆ ವಿಡಿಯೋಗಳನ್ನು ಹರಿಬಿಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು.ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಾದ ಸಮೀರ್ ಶೇಖ್, ಅಬ್ದುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಅವರನ್ನು ಬಂಧಿಸಿ ಮೂರು ದಿನಗಳ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ಸಂದರ್ಭ ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಮತ್ತೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯ ಖಾಸಗಿ ವಿಡಿಯೋ ಕೂಡ ಪತ್ತೆಯಾಗಿದೆ. ಅವರಿಗೂ ಬೆದರಿಕೆ ಹಾಕಿ ಲಕ್ಷಾಂತರ ರೂ. ವಸೂಲಿ ಮಾಡಿರುವ ಆರೋಪವೂ ಕೇಳಿಬಂದಿದೆ.ಈ ಪ್ರಕರಣ ಬೆಳಗಾವಿಯಲ್ಲಿ ಭಾರೀ ಸಂಚಲನ ಮೂಡಿಸಿದ್ದು ಅಧಿಕಾರಿಗಳ ಭದ್ರತೆ ಹಾಗೂ ಖಾಸಗಿತನದ ಕುರಿತ ಚರ್ಚೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದ್ದು, ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.