2026-07-23 12:17:33

Election Commission has authority to appoint vote counting staff | ಮತ ಎಣಿಕೆ ಸಿಬ್ಬಂದಿ ನೇಮಕಕ್ಕೆ ಚುನಾವಣಾ ಆಯೋಗ ಅದಿಕಾರ ಇದೆ ಸುಪ್ರೀಂಕೋರ್ಟ್ | Speed News Kannada

Election Commission has authority to appoint vote counting staff | ಮತ ಎಣಿಕೆ ಸಿಬ್ಬಂದಿ ನೇಮಕಕ್ಕೆ ಚುನಾವಣಾ ಆಯೋಗ ಅದಿಕಾರ ಇದೆ ಸುಪ್ರೀಂಕೋರ್ಟ್ | Speed News Kannada

ನವದೆಹಲಿ: ಮತ ಎಣಿಕೆಗೆ ಕೇಂದ್ರ ಸರ್ಕಾರದ ನೌಕರರನ್ನು ನೇಮಕ ಮಾಡುವ ಆಯೋಗದ ನಿರ್ಧಾರ ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಶನಿವಾರ ತಿರಸ್ಕರಿಸಿದೆ. ಇದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಹಿನ್ನೆಡೆ ಉಂಟಾಗಿದೆ. 
ಟಿಎಂಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾ. ಪಿ.ಎಸ್‌. ನರಸಿಂಹ ಮತ್ತು ನ್ಯಾ. ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಮತ ಎಣಿಕೆ ಸಿಬ್ಬಂದಿಯನ್ನು ಆಯೋಗವು ನೇಮಕಮಾಡಬಹುದು. ಈ ಸಂಬಂಧ ಮತ್ತೊಂದು ಆದೇಶದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಮತ ಎಣಿಕೆಗೆ ಸಿಬ್ಬಂದಿಯನ್ನು ನೇಮಿಸುವ ಸಂಬಂಧ ಆಯೋಗ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕಲ್ಕತ್ತ ಹೈಕೋರ್ಟ್‌ ಏ. 30ರಂದು ವಜಾಗೊಳಿಸಿತ್ತು. ನಂತರ ಟಿಎಂಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮತ ಎಣಿಕೆ ಸಿಬ್ಬಂದಿಯನ್ನು ಚುನಾವಣಾ ಆಯೋಗವು ಆಯ್ಕೆ ಮಾಡಬಹುದು ಮತ್ತು ನೇಮಕ ಮಾಡಬಹುದಾಗಿದೆ. ಅದು, ಏಪ್ರಿಲ್‌ 13ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ದೋಷವಿದೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಿಬ್ಬಂದಿ ಇಬ್ಬರನ್ನೂ ನೇಮಕ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ವಿಚಾರವಾಗಿ ಟಿಎಂಸಿ ಭಯಪಡಬೇಕಿಲ್ಲ. ಸುತ್ತೋಲೆಯಲ್ಲಿ ಏನಿದೆಯೋ ಅದನ್ನು ಯಥಾವತ್ತಾಗಿ ಜಾರಿಗೊಳಿಸಲಾಗುವುದು ಎಂದು ಆಯೋಗ ಹೇಳಿದೆ.
ಟಿಎಂಸಿ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು, ಏಪ್ರಿಲ್‌ 13ರಂದೇ ಸುತ್ತೋಲೆ ಹೊರಡಿಸಿದ್ದರೂ, ಅದರ ಬಗ್ಗೆ ಗೊತ್ತಾಗಿದ್ದು ಏಪ್ರಿಲ್‌ 29ರಂದು ಎಂದು ನ್ಯಾಯಾಲಯದ ಗಮನಕ್ಕೆ ತಂದರು. 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು ನಾಡಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.