ದಾವಣಗೆರೆ: ಮದ್ಯದ ದಾಸನಾಗಿದ್ದ ತಂದೆಯೊಬ್ಬ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಗಳ ಶಾಲಾ ಪುಸ್ತಕಗಳನ್ನು ಸುಟ್ಟು ಹಾಕಿ ಶಾಲೆಗೆ ಹೋಗದಂತೆ ತಡೆದಿದ್ದ. ಆದರೆ, ಬಾಲಕಿಯ ನೆರವಿಗೆ ಬಂದ ಪೊಲೀಸರು ಹೊಸ ಪುಸ್ತಕ ಕೊಡಿಸುವ ಮೂಲಕ ಮಾನವೀಯತೆ ಮೆರದಿದ್ದಾರೆ ಮತ್ತು ಮಗಳ ಓದಿಗೆ ಅಡ್ಡಿಪಡಿಸದಂತೆ ತಾಕೀತು ಮಾಡಿದ್ದಾರೆ.
ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಅರುಂಡಿ ಗ್ರಾಮದ ನಿವಾಸಿಗಳಾದ ಚಂದ್ರಮ್ಮ ಮತ್ತು ಚಿಕ್ಕಪ್ಪ ದಂಪತಿಯ ಪುತ್ರಿ ತೇಜಸ್ವಿನಿ. ಈಕೆ ಕೆಂಚಿಕೊಪ್ಪ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ, ಆಕೆಯ ತಂದೆ ಚಿಕ್ಕಪ್ಪ ಮದ್ಯವ್ಯಸನಿಯಾಗಿದ್ದು, ನಿತ್ಯವೂ ಕುಡಿದು ಬಂದು ಮನೆಯಲ್ಲಿ ಹೆಂಡತಿ ಮತ್ತು ಮಗಳ ಜೊತೆ ಗಲಾಟೆ ಮಾಡುತ್ತಿದ್ದ.
ಅದೇ ರೀತಿ ಕೆಲವು ದಿನಗಳ ಹಿಂದೆ ಮದ್ಯದ ಮತ್ತಿನಲ್ಲಿ ಮನೆಗೆ ಬಂದು ಏಕಾಏಕಿ ಮಗಳ ಶಾಲಾ ಬ್ಯಾಗ್ ಹಾಗೂ ಎಲ್ಲಾ ಪಠ್ಯಪುಸ್ತಕಗಳನ್ನು ಬೆಂಕಿಗೆ ಹಾಕಿ ಸುಟ್ಟು ಹಾಕಿದ್ದಾನೆ. ಇನ್ನು ಮುಂದೆ ಶಾಲೆಗೆ ಹೋಗುವುದು ಬೇಡ, ಹೆನೀನು ಓದಿದ್ದು ಸಾಕು, ಮನೆಯಲ್ಲಿಯೇ ಇರು ಎಂದು ಬೆದರಿಕೆ ಹಾಕಿದ್ದಾನೆ.
ಎದೆಗುಂದದ ಬಾಲಕಿ 112 ಕರೆ ಮಾಡಿ ಪೊಲೀಸರ ನೆರವು ಕೋರಿದಾಳೆ. ನನ್ನ ಅಪ್ಪ ಕುಡಿದು ಬಂದು ಶಾಲೆಗೆ ಹೋಗಬೇಡ ಎನ್ನುತ್ತಾರೆ, ನನ್ನ ಪುಸ್ತಕ ಸುಟ್ಟು ಹಾಕಿದ್ದಾರೆ, ದಯವಿಟ್ಟು ಸಹಾಯ ಮಾಡಿ ಎಂದು ಬೇಡಿಕೊಂಡಿದ್ದಾಳೆ.
ಕೂಡಲೇ ತುರ್ತು ಸ್ಪಂದನಾ ವಾಹನದ ಸಿಬ್ಬಂದಿಗಳಾದ ಹೇಮರಾಜ್ ಮತ್ತು ರವಿಕುಮಾರ್ ಅವರು ಸ್ವಲ್ಪವೂ ವಿಳಂಬ ಮಾಡದೆ, ಅರುಂಡಿ ಗ್ರಾಮದ ಆಕೆಯ ಮನೆಗೆ ಧಾವಿಸಿದ್ದಾರೆ. ಮನೆಯಲ್ಲಿ ಸುಟ್ಟು ಕರಕಲಾಗಿದ್ದ ಪುಸ್ತಕಗಳ ಬೂದಿ ಹಾಗೂ ಕಣ್ಣೀರಿಡುತ್ತಿದ್ದ ಬಾಲಕಿಯನ್ನು ಸಮಾಧಾನಪಡಿಸಿ ಧೈರ್ಯ ತುಂಬಿದ್ದಾರೆ. ತಾವೇ ಹಣ ಹಾಕಿ ಆಕೆಗೆ ಅತ್ಯಗತ್ಯವಿದ್ದ ಹೊಸ ಪಠ್ಯಪುಸ್ತಕ, ನೋಟ್‌ಬುಕ್, ಪೆನ್ನು ಹಾಗೂ ಇತರ ಲೇಖನ ಸಾಮಗ್ರಿಗಳನ್ನು ಖರೀದಿಸಿ ತಂದುಕೊಟ್ಟಿದ್ದಾರೆ.
ನಂತರ ಅಡಗಿ ಕುಳಿತಿದ್ದ ತಂದೆ ಚಿಕ್ಕಪ್ಪನನ್ನು ಪತ್ತೆಹಚ್ಚಿ, ಬುದ್ದಿ ಹೇಳಿದ್ದಾರೆ. ಇನ್ನು ಮುಂದೆ ಕುಡಿದು ಬಂದು ಗಲಾಟೆ ಮಾಡಿದರೆ ಅಥವಾ ಮಗಳ ಓದಿಗೆ ಅಡ್ಡಿಪಡಿಸಿದರೆ ಜೈಲಿಗೆ ಕಳುಹಿಸುತ್ತೇವೆ ಎಂದು ಬುದ್ಧಿವಾದ ಹೇಳಿದ್ದಾರೆ.