ರಾಮನಗರ: ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಉದ್ದೇಶಿತ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಫಲವತ್ತಾದ ಭೂಮಿಯ ಸ್ವಾಧೀನ ಕೈ ಬಿಡಬೇಕು ಎಂದು ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಮಿತಿ ಪ್ರತಿನಿಧಿಗಳು ಹಾಗೂ ರೈತರ ನಿಯೋಗವು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಿಯೋಗವು, ಯೋಜನೆಗಾಗಿ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆ ರದ್ದುಪಡಿಸಬೇಕು. ಆ ಮೂಲಕ, ಈ ಭಾಗದ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಉಪನಗರ ಯೋಜನೆಗೆ ಗುರುತಿಸಿರುವ ಭೈರಮಂಗಲ ಗ್ರಾ.ಪಂ. ವ್ಯಾಪ್ತಿಯ 10 ಗ್ರಾಮಗಳು ಹಾಗೂ ಕಂಚುಗಾರನಹಳ್ಳಿ ಗ್ರಾ.ಪಂ.ನ 16 ಗ್ರಾಮಗಳು ಕೃಷಿ ಮತ್ತು ತೋಟಗಾರಿಕೆಯ ಫಲವತ್ತಾದ ಭೂಮಿ ಹೊಂದಿವೆ. ಬಹು ವಾರ್ಷಿಕ ಬೆಳೆಗಳು ಸೇರಿದಂತೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಜೊತೆಗೆ ಈ ಪ್ರದೇಶದ ರೈತರು ತಮ್ಮ ಬದುಕಿಗಾಗಿ ಹೈನುಗಾರಿಕೆ ನೆಚ್ಚಿಕೊಂಡಿದ್ದಾರೆ ಆದ್ದರಿಂದ ನೋಟಿಫೈ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ಈ ಯೋಜನೆಗೆ ಬಹುತೇಕ 3,500 ರೈತರು ಯೋಜನೆಗೆ ವಿರೋಧ ಇದೆ. ಜಿಲ್ಲಾಧಿಕಾರಿ ಕಚೇರಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ತಹಶೀಲ್ದಾರ್ ಕಚೇರಿ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ರೈತರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಭೂ ಸ್ವಾಧೀನ ಕೈ ಬಿಡಬೇಕು ಎಂದು ರೈತರ ನಿಯೋಗವು ಮನವಿ ಮಾಡಿಕೊಂಡಿದೆ.
ಬಿಡದಿ ಯೋಜನೆಗಾಗಿ 2025ರ ಮಾರ್ಚ್ 13ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಇದೀಗ ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಯೋಜನೆ ಆರಂಭವಾದ ದಿನದಿಂದಲೂ ರೈತರ ಭೂ ಹಿತರಕ್ಷಣಾ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಈ ಮುಷ್ಕರ ಇದೀಗ 428ನೇ ದಿನಕ್ಕೆ ಕಾಲಿಟ್ಟಿದೆ ಎಂದು ಹೇಳಿದ್ದಾರೆ.