ಮಂಗಳೂರು: ನಾನು ಸಚಿವನಾಗುತ್ತೇನೋ ಗೊತ್ತಿಲ್ಲ, ಒಂದು ವೇಳೆ ಅವಕಾಶ ಒದಗಿ ಬಂದರೆ ಉಪಸಭಾಧ್ಯಕ್ಷರು ಅಥವಾ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾಧ್ಯಕ್ಷರಿಗೆ ಯಾವ ಹೈಕಮಾಂಡ್ ಇರುವುದಿಲ್ಲ. ನನಗೆ ನಾನೇ ಹೈಕಮಾಂಡ್. ಸದ್ಯಕ್ಕೆ ನನಗೆ ಯಾವ ಪಕ್ಷವೂ ಇಲ್ಲ ಎಂದರು.
ಈ ಹಿಂದೆ ಸರ್ಕಾರ ರಚನೆಯಾಗುವಾಗಲೂ ಸಚಿವ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬಂದಿತ್ತು. ಆದರೆ ನಾನು ವಿಧಾನಸಭಾಧ್ಯಕ್ಷನಾದೆ. ಈಗಲೂ ಅದೇ ಹುದ್ದೆಯಲ್ಲಿರುವುದರಿಂದ ರಾಜಕೀಯ ಮಾತನಾಡುವುದಿಲ್ಲ. ಸದ್ಯಕ್ಕೆ ಪಕ್ಷದ ವಿಚಾರವೇ ನನ್ನ ತಲೆಯಲ್ಲಿ ಇಲ್ಲ. ಆ ಬಗ್ಗೆ ಆಲೋಚನೆ ಮಾಡುವುದೂ ಇಲ್ಲ ಎಂದರು.
ಸ್ಪೀಕರ್ ಆಗಿರುವ ಕಾರಣ, ಮುಖ್ಯಮಂತ್ರಿಯವರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರುತ್ತೇನೆ. ಒಂದು ವೇಳೆ ಮಂತ್ರಿಯಾದರೂ ವೇದಿಕೆ ಹತ್ತುತ್ತೇನೆ. ಕೇವಲ ಶಾಸಕನಾದರೆ ವೇದಿಕೆ ಮುಂದುಗಡೆ ಕುಳಿತುಕೊಳ್ಳಬೇಕಾಗುತ್ತದೆ ಅಷ್ಟೆ. ಸಚಿವನಾಗುತ್ತೇನೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಬೇಕಾದ ಪ್ರಮೇಯ ಎದುರಾದರೆ, ಉಪಸಭಾಧ್ಯಕ್ಷರಿಗೆ ಅಥವಾ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಅವರಿಗೆ ಸಲ್ಲಿಸುತ್ತೇನೆ ಎಂದರು.
ಸಚಿವ ಸ್ಥಾನಕ್ಕಾಗಿ ನನಗೂ ಜಮೀರ್ ಅಹಮದ್ ಖಾನ್‌ಗೂ ಯಾವುದೇ ಪೈಪೋಟಿ ಇಲ್ಲ. ನಾವಿಬ್ಬರೂ ಪರಸ್ಪರ ಚೆನ್ನಾಗಿದ್ದೇವೆ ಎಂದು ಹೇಳಿದರು.
ಪ್ರತಿಯೊಂದು ಖಾತೆಗೂ ಅದರದ್ದೇ ಅದ ಮಹತ್ವ ಇರುತ್ತದೆ. ಸಚಿವನಾದರೆ, ಹೊಸ ಯೋಜನೆಗಳನ್ನು ರೂಪಿಸಿ ಜನರಿಗೆ ಪ್ರಯೋಜನವಾಗುವಂತಹ ಕೆಲಸಗಳನ್ನು ಮಾಡಲು ಅವಕಾಶ ಸಿಗುತ್ತದೆ. ವಿಧಾನಸಭಾಧ್ಯಕ್ಷನಾದರೆ ಶಾಸಕರಿಗೆ ಬೇಕಾಗುವ ಕೆಲಸ ಹಾಗೂ ಕಾನೂನು ರೂಪಿಸುವ ಪ್ರಕ್ರಿಯೆಗಷ್ಟೇ ಸೀಮಿತವಾಗಬೇಕಾಗುತ್ತದೆ. ಆದರೆ ಅದೊಂದು ಗೌರವಯುತ ಸ್ಥಾನ. ತನ್ನದೇ ಆದ ಮಹತ್ವವನ್ನು ಹಾಗೂ ವಿಶೇಷಾಧಿಕಾರವನ್ನು ಹೊಂದಿರುವ ಹುದ್ದೆ ಅದಾಗಿದೆ ಎಂದರು.