ನವದೆಹಲಿ: ಎಷ್ಟೇ ಬಹುಮತವಿದ್ದರೂ ಸಂಪುಟ ರಚನೆ, ವಿಸ್ತರಣೆ ಯಾವುದೇ ಪಕ್ಷಕ್ಕೆ ಕಗ್ಗಂಟೇ ಸರಿ. ಜಾತಿ, ಜಿಲ್ಲೆ, ಪ್ರಾಂತ, ಹಿರಿತನ ನಿಷ್ಠೆ, ಹೈಕಮಾಂಡ್ ಆಯ್ಕೆ… ಹೀಗೆ ಸಾಕಷ್ಟು ಒತ್ತಡಗಳು ಇರುತ್ತವೆ. ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ಈ ಕಷ್ಟ ತಪ್ಪಿದ್ದಲ್ಲ. ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರೂ ತಮ್ಮ ಬೆಂಬಲಿಗರ ಪಟ್ಟಿಯೊಂದನ್ನು ಹಿಡಿದುಕೊಂಡು ಲಾಬಿ ಮುಂದುವರೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರೂ ತಮ್ಮ ನಿಷ್ಠಾವಂತರನ್ನು ಸೇರ್ಪಡೆ ಮಾಡಲು ಕಸರತ್ತು ನಡೆಸುತ್ತಿದ್ದಾರೆ.
ನಾಳೆ ಸಂಜೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಕಡೆ ರಾಹುಲ್ ಗಾಂಧಿ ಯುವಕರಿಗೆ ಆದ್ಯತೆ ನೀಡಲು ಹಿರಿಯ ತಲೆಗಳಿಗೆ ಕೊಕ್ ನೀಡಲು ಅದೇಶಿಸಿದ್ದಾರೆ. ಕೇರಳದಲ್ಲಿ ಈ ಪ್ರಯೋಗದಲ್ಲಿ ಸಫಲರಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಕನಿಷ್ಠ 15 ಮಂದಿ ಸಚಿವರು ಹೊರಗುಳಿಯಬೇಕಾಗುತ್ತದೆ. ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕಳುಹಿಸಬೇಕು ಎನ್ನುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಸರಣಿ ಸಭೆಗಳು ನಡೆಯುತ್ತಲೇ ಇವೆ.
ಈ ಮಧ್ಯೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಪ್ರತ್ಯೇಕ ಪಟ್ಟಿಗಳನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲ ಈ ಪಟ್ಟಿಗಳನ್ನು ಪರಿಶೀಲಿಸಿ, ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಆದರೂ ಪಟ್ಟಿ ಆಖೈರುಗೊಂಡಿಲ್ಲ.
ಇಂದು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಭೆ ನಡೆಯಲಿದೆ. ಹೆಚ್ಚೆಂದರೆ 10-12 ಸಚಿವರ ಪಟ್ಟಿ ಸಿದ್ದವಾಗಬಹುದು ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಮಟ್ಟಿಗೆ ಸಚಿವ ಸಂಪುಟ ರಚನೆಗೆ ಜಾತಿಯೇ ಮೊದಲ ಆದ್ಯತೆ. ಒಕ್ಕಲಿಗ, ಲಿಂಗಾಯತ, ಎಸ್ ಸಿ. ಎಸ್ ಟಿ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಲೇಬೇಕಾಗಿದೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಮತ್ತೆ ವಿಧಾನಸಭೆ ಚುನಾವಣೆ ಎದುರಾಗಲಿದೆ. ಆದ್ದರಿಂದ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.