ಬೆಂಗಳೂರು: ಬೆಂಗಳೂರು ನಗರದಲ್ಲಿ ಸುಮಾರು 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, 9 ಲಕ್ಷ ಇ–ಖಾತಾಗಳನ್ನು ಮಾಲೀಕರಿಗೆ ಹಂಚಿಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಅವರು, ಖಾತಾ ಪರಿವರ್ತನೆ ಮಾಡಿಸಿಕೊಂಡ ನಾಗರೀಕರಿಗೆ ಖಾತಾ ಪತ್ರ ವಿತರಿಸಿ ಮಾತನಾಡಿದರು.
ಉಚಿತವಾಗಿ ಇ–ಖಾತಾ ಅಭಿಯಾನ ಪ್ರಾರಂಭಿಸಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ. ಅಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನವಾಗಿದೆ. ಈ ಹಿಂದೆ ಕೃಷಿ ಭೂಮಿ ಡಿಜಿಟಲೀಕರಣಕ್ಕೆ ಭೂಮಿ ಯೋಜನೆ ತರಲಾಗಿತ್ತು. ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ–ಖಾತೆ ವ್ಯವಸ್ಥೆ ತರಲು ಉದ್ದೇಶಿಸಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಾವೇರಿ ಸಾಫ್ಟ್‌ವೇರ್‌ನಲ್ಲಿ ದಾಖಲೆಗಳು ಆಧಾರ್ ಜೊತೆ ಲಿಂಕ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಯೂನಿಫಾರ್ಮ್ ಲ್ಯಾಂಡ್ ರೆಕಾರ್ಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮೂಲಕ ಬಿ ಖಾತಾದಿಂದ ಎ ಖಾತೆ ನೀಡಲಾಗುತ್ತದೆ. ಈಗಾಗಲೇ ಏಳು ಸಾವಿರ ಅರ್ಜಿಗಳು ಬಂದಿದ್ದು, ಅರ್ಜಿ ಸಲ್ಲಿಸಿರುವವರಿಗೆ 15 ದಿನದಲ್ಲಿ ಖಾತಾ ನೀಡಲು ಸಮಯ ನಿಗದಿಪಡಿಸಲಾಗಿದೆ ಎಂದರು.
ಒಂದೇ ದಿನ 17 ಸಾವಿರ ನಿವೇಶನ ಹಂಚಿಕೆ:
ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ನ್ಯಾಯಾಲಯ ಸೂಚನೆ ನೀಡಿದೆ. ಈ ಬಡಾವಣೆಯಲ್ಲಿ 34,977 ನಿವೇಶನ ರಚಿಸಲಾಗಿದ್ದು, 17 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಬೇಕಾಗಿದೆ. ಶೇ 75ರಷ್ಟು ಮಾಲೀಕರು ಒಪ್ಪಿಕೊಂಡಿದ್ದಾರೆ. ಉಳಿದ ಮಾಲೀಕರಿಗೆ ನಾನೇ ಮನವಿ ಮಾಡಿಕೊಳ್ಳುತ್ತೇನೆ ಎಂದರು.