ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲು ಸೇರಿ ಈಗ ಒಂದು ವರ್ಷ ಪೂರ್ಣಗೊಂಡಿದೆ. ತಮ್ಮ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಹತ್ಯೆ ಮಾಡಿದ ಗಂಭೀರ ಆರೋಪ ದರ್ಶನ್ ಮೇಲಿದೆ. ಈ ಘಟನೆ ನಡೆದು ಸುಮಾರು 20 ತಿಂಗಳು ಕಳೆದಿದ್ದು, ಕಾನೂನು ಪ್ರಕ್ರಿಯೆಗಳ ನಡುವೆ ದರ್ಶನ್ ಒಟ್ಟಾರೆಯಾಗಿ 365 ದಿನಗಳನ್ನು ಜೈಲಿನಲ್ಲಿ ಕಳೆದಂತಾಗಿದೆ.
ಬಂಧನದ ವಿವರಗಳನ್ನು ನೋಡುವುದಾದರೆ, 2024ರ ಜೂನ್ 11ರಂದು ಮೈಸೂರಿನಲ್ಲಿ ಮೊದಲ ಬಾರಿಗೆ ದರ್ಶನ್ ಬಂಧನಕ್ಕೊಳಗಾಗಿದ್ದರು. ಅಕ್ಟೋಬರ್ 30ರವರೆಗೆ ಸುಮಾರು 131 ದಿನಗಳ ಕಾಲ ಪರಪ್ಪನ ಅಗ್ರಹಾರ ಮತ್ತು ಬಳ್ಳಾರಿ ಜೈಲಿನಲ್ಲಿದ್ದ ಅವರು, ನಂತರ ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ 2025ರ ಆಗಸ್ಟ್ 14ರಂದು ದರ್ಶನ್ ಅವರನ್ನು ಮತ್ತೆ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಯಿತು. ಎರಡನೇ ಬಾರಿ ಜೈಲು ಸೇರಿ ಈಗ 226 ದಿನಗಳು ಸಂದಿವೆ.
ಸದ್ಯ ದರ್ಶನ್ ಜೈಲಿನಲ್ಲೇ ಕಾಲ ಕಳೆಯುತ್ತಿದ್ದು, ಅವರ ಬಹುನಿರೀಕ್ಷಿತ 'ಡೆವಿಲ್' ಸಿನಿಮಾ ಬಿಡುಗಡೆಯಾದಾಗಲೂ ಅಭಿಮಾನಿಗಳ ಸಂಭ್ರಮವನ್ನು ನೇರವಾಗಿ ನೋಡಲಾಗದೆ ಜೈಲಿನಲ್ಲಿ ಕೊರಗುವಂತಾಯಿತು. ದರ್ಶನ್ ಪರ ವಕೀಲರು ಅವರನ್ನು ಹೊರತರುವಲ್ಲಿ ನಿರಂತರ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆದರೆ, ನ್ಯಾಯಾಲಯವು ಅವರಿಗೆ ಮತ್ತೆ ಜಾಮೀನು ನೀಡುತ್ತದೆಯೇ ಅಥವಾ ವಿಚಾರಣೆ ಯಾವ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.