ಬೆಂಗಳೂರು: ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಇದೇ ತಿಂಗಳು 13 ಹಾಗೂ 14ರಂದು ಭಾರತೀಯ ವಿಜ್ಞಾನ ಸಂಸ್ಥೆಯ ಟಾಟಾ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ. ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಭಾರತದಲ್ಲಿ 6,628 ಅಣೆಕಟ್ಟುಗಳಿದ್ದು, ಕರ್ನಾಟಕದಲ್ಲಿ 231 ಅಣೆಕಟ್ಟುಗಳಿವೆ. ಅಣೆಕಟ್ಟುಗಳ ಸುರಕ್ಷತೆ ಕುರಿತುದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಒಂದೂವರೆ ವರ್ಷಗಳ ಹಿಂದೆ ಜೈಪುರದಲ್ಲಿ ಈ ಸಮ್ಮೇಳನ ನಡೆದಿತ್ತು. ಈಗ ಜಲಶಕ್ತಿ ಸಚಿವಾಲಯ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಈ ಸಮ್ಮೇಳನ ಆಯೋಜಿಸುತ್ತಿದೆ. ಇದಕ್ಕೆ ಕೇಂದ್ರ ಜಲಶಕ್ತಿ ಆಯೋಗವು ಮಾರ್ಗದರ್ಶನ ನೀಡಿದೆ ಎಂದು ಹೇಳಿದರು..
ಅಣೆಕಟ್ಟು ಸುರಕ್ಷತೆ ಕುರಿತು 46 ಸಂಶೋಧನಾ ವರದಿಗಳನ್ನು ಮಂಡಿಸಲಾಗುತ್ತದೆ. ಕೇಂದ್ರ ಸಚಿವರಾದ ವಿ. ಸೋಮಣ್ಣ, ರಾಜ್ ಭೂಷಣ್ ಚೌಧರಿ, ರಾಜ್ಯ ಸಚಿವ ಬೋಸರಾಜು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 10 ದೇಶಗಳ 25 ಅಂತರರಾಷ್ಟ್ರೀಯ ತಜ್ಞರು ಸೇರಿದಂತೆ 400ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ತಾಂತ್ರಿಕ ವಿಚಾರ ಸಂಕಿರಣ, ವಸ್ತುಪ್ರದರ್ಶನ ಇರಲಿದ್ದು, ರಾಜ್ಯದ ಹಿತಾಸಕ್ತಿ ಕಾಪಾಡಲು ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇವೆ. ಅಣೆಕಟ್ಟುಗಳು ನೀರಾವರಿ, ಇಂಧನ ಉತ್ಪಾದನೆ, ಪ್ರವಾಹ ನಿಯಂತ್ರಣ, ನೀರು ಸರಬರಾಜು ಹಾಗೂ ಮಣ್ಣಿನ ಸಂರಕ್ಷಣೆಯ ಆಧಾರವಾಗಿವೆ. ಸುದೀರ್ಘ ಕಾಲದ ಯೋಜನೆ ಗಮನದಲ್ಲಿಟ್ಟುಕೊಂಡು ಈ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿರುವ ಶೇ.75ರಷ್ಟು ಅಣೆಕಟ್ಟುಗಳು 25 ವರ್ಷಗಳಷ್ಟು ಹಳೆಯವು. ಅಣೆಕಟ್ಟುಗಳಲ್ಲಿ ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಈಗಾಗಲೇ 19 ರಾಜ್ಯಗಳಲ್ಲಿ 733 ಅಣೆಕಟ್ಟುಗಳ ಸುರಕ್ಷತೆಗೆ 10,211 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 58 ಅಣೆಕಟ್ಟುಗಳ ಸುರಕ್ಷತೆಗೆ 1,500 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದೇವೆ. ಈಗಾಗಲೇ ತುಂಗಭದ್ರಾ ಅಣೆಕಟ್ಟು ಕ್ರೆಸ್ಟ್ ಗೇಟ್ ಗಳ ಬದಲಾವಣೆ ಕಾರ್ಯ ಆರಂಭವಾಗಿದೆ. ಅದೇ ರೀತಿ ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿದ್ದು, ಆದ್ಯತೆ ಮೇರೆಗೆ ದುರಸ್ಥಿ ಕಾಮಗಾರಿ ಕೈಗೊಂಡಿದ್ದೇವೆ ಎಂದೂ ಶಿವಕುಮಾರ್ ಅವರು ವಿವರಿಸಿದರು.