2026-04-23 09:20:36

Cylinder problem to be resolved within a week Minister K H Muniyappa | ವಾರದೊಳಗೆ ಸಿಲಿಂಡರ್‌ ಸಮಸ್ಯೆಗೆ ಪರಿಹಾರ ಸಚಿವ ಕೆ ಹೆಚ್ ಮುನಿಯಪ್ಪ | Speed News Kannada

Cylinder problem to be resolved within a week Minister K H Muniyappa | ವಾರದೊಳಗೆ ಸಿಲಿಂಡರ್‌ ಸಮಸ್ಯೆಗೆ ಪರಿಹಾರ ಸಚಿವ ಕೆ ಹೆಚ್ ಮುನಿಯಪ್ಪ | Speed News Kannada

ಬೆಂಗಳೂರು, ಮಾ.18- ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿರಾಜ್ಯದಲ್ಲಿ ತಲೆದೋರಿರುವ ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡ‌ರ್ ಸಮಸ್ಯೆ ವಾರದೊಳಗೆ ಸಹಜಸ್ಥಿತಿಗೆ ಬರಲಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ವಿಧಾನ ಪರಿಷತ್‌ನಲ್ಲಿ ಹೇಳಿದರು. ಸದಸ್ಯರಾದ ಐವಾನ್ ಡಿಸೋಜಾ, ರಮೇಶ್ ಬಾಬು ಮತ್ತಿತರ ಸದಸ್ಯರು ಗ್ಯಾಸ್‌ ಸಮಸ್ಯೆ ಕುರಿತು ವಿಷಯ ಪ್ರಸ್ತಾಪಿಸಿದಾಗ, ಉತ್ತರಿಸಿದ ಸಚಿವ ಮುನಿಯಪ್ಪ, ಕಾಳಸಂತೆಯಲ್ಲಿ ಗ್ಯಾಸ್ ಪೂರೈಕೆದಾರರು ಸಿಲಿಂಡರ್‌ಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ಅಂತಹ ಪ್ರಕರಣಗಳು ಕಂಡು ಬಂದರೇ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಪ್ರತಿದಿನ 3,50 921 ಸಿಲಿಂಡರ್‌ಗಳ ಅಗತ್ಯವಿದೆ. ಆದರೆ ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದ ನಮ ಬೇಡಿಕೆಗೆ ತಕ್ಕಂತೆ ಗ್ಯಾಸ್ ಪೂರೈಕೆ ಆಗುತ್ತಿಲ್ಲ. ಎಲ್‌ಪಿಜಿ ಕೊರತೆಗೆ ಸಂಬಂಧಿಸಿದ ಸಮಸ್ಯೆ ಇನ್ನೂ ಒಂದು ವಾರ ಇರುತ್ತದೆ. ಇದನ್ನು ಅರಿತು ಹೋಟೆಲ್ ಮಾಲೀಕರು ಪರಿಸ್ಥಿತಿಗೆ ಹೊಂದಿಕೊಂಡು ಸಹಕರಿಸಬೇಕು. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಮುಂದಿನ 1 ವಾರದವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್‌ಪಿಜಿ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಮಾಲೀಕರು ತಾಳೆಯಿಂದಿರಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ನಿತ್ಯ 44,000 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೇಕು. ಶೇ.20ರಂತೆ ನಮಗೆ 9,000 ಸಿಲಿಂಡ‌ರ್ ಸಿಗುತ್ತೆ. ಇದರಲ್ಲಿ 4,000 ಆಸ್ಪತ್ರೆಗಳಿಗೆ ಹೋಗುತ್ತೆ. ಆಟೋಗಳಿಗೆ 2,500 ಪೂರೈಕೆ ಹಾಗೂ ಹೋಟೆಲ್‌ಗಳಿಗೆ ನಿತ್ಯ 1,000 ಸಿಲಿಂಡರ್‌ ಕೊಡಲು ನಿರ್ಧಾರ ಮಾಡಲಾಗಿದೆ. ತೈಲ ಕಂಪನಿಗಳೊಂದಿಗೆ ನಡೆಸಿದ ಸಭೆಯಲ್ಲಿ ಆದ್ಯತಾ ಸೇವೆಗಳೆಂದು ಪರಿಗಣಿಸಲಾಗಿರುವ ಆಸ್ಪತ್ರೆಗಳು, ಹಾಸ್ಟೆಲ್, ವಸತಿ ಶಾಲೆಗಳು, ಆಟೋ ಸೇರಿದಂತೆ ಇನ್ನಿತರ 5-6 ವಲಯಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಡೊಮೆಸ್ಟಿಕ್ ಸಿಲಿಂಡರ್ ಸಮಸ್ಯೆ ಉಂಟಾಗಿಲ್ಲ. ಎಷ್ಟು ಪೂರೈಕೆ ಮಾಡಬೇಕು ಅಷ್ಟು ಆಗಿದೆ. ಗೃಹ ಬಳಕೆ ಸಿಲಿಂಡರ್‌ಗಳನ್ನು ನಿಲ್ಲಿಸುವುದಿಲ್ಲ. 3 ಲಕ್ಷ ಸಿಲಿಂಡರ್ ಬಳಕೆ ಆಗುತ್ತಿದೆ. ಅದನ್ನು ಕೂಡಾ ವಿತರಣೆ ಮಾಡುತ್ತಿದ್ದೇವೆ. ಆದರೆ ಕಮರ್ಷಿಯಲ್ ಗ್ಯಾಸ್ ಸಮಸ್ಯೆ ಆಗಿದೆ. ಶೇ.20 ರಷ್ಟು ಮಾತ್ರ ಕೊಡಲು ಕೇಂದ್ರ ತಿಳಿಸಿದೆ. 9 ಸಾವಿರ ಕಮರ್ಷಿಯಲ್ ಗ್ಯಾಸ್ ವಿತರಣೆ ಮಾಡುತ್ತಿದ್ದೇವೆ.ಎಂದರು.
ರೆಸ್ಟೋರೆಂಟ್, ಹೋಟೆಲ್‌ಗೆ 1 ಸಾವಿರ ಗ್ಯಾಸ್ ಮಾತ್ರ ಕೊಡಲು ಅವಕಾಶ ಇದೆ. ಯಾರಿಗೆ ಕೊಡಬೇಕು ಎಂಬುದೇ ನಮಗೆ ಗೊತ್ತಾಗುತ್ತಿಲ್ಲ. ಹೀಗಾಗಿ ಒಂದು ವಾರ ಸಹಿಸಿಕೊಳ್ಳಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಕೇಂದ್ರ ಸರ್ಕಾರ ಇರಾನ್ ಜೊತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದೆ. 16 ಹಡಗುಗಳು ಕ್ಯೂನಲ್ಲಿವೆ. ಅವು ಬಂದರೆ ಸಮಸ್ಯೆ ಸರಿ ಆಗುತ್ತದೆ ಎಂದು ಸಲಹೆ ಮಾಡಿದರು. ಹೋಟೆಲ್ ಅಸೋಸಿಯೇಷನ್ ಅವರ ಜೊತೆ ಮಾತಾಡಿದ್ದೇವೆ. ಒಂದು ವಾರ ಸಹಿಸಿಕೊಂಡರೆ 15 ಸಾವಿರ ಸಿಲಿಂಡ‌ರ್ ಸಂಗ್ರಹ ಮಾಡಿ ಅದನ್ನು ಹೇಗೆ ಹಂಚಿಕೆ ಮಾಡಬೇಕು ಎಂದು ಅಸೋಸಿಯೇಷನ್ ಅವರ ಜೊತೆ ಚರ್ಚೆ ನಡೆಸಿ ಹಂಚಿಕೆ ಮಾಡುತ್ತೇವೆ. ಯುದ್ದ ನಡೆಯುತ್ತಿರುವ ಕಾರಣ ಹೋಟೆಲ್‌ನವರು ಸಹಕಾರ ನೀಡಬೇಕು. ಶಾಸಕರ ಭವನದಲ್ಲಿನ ಗ್ಯಾಸ್ ಸಮಸ್ಯೆ ಗಮನಕ್ಕೆ ಬಂದಿದೆ. ಅಧಿವೇಶನ ಮುಗಿಯುವವರೆಗೂ ಶಾಸಕರ ಭವನಕ್ಕೆ ಕೊಡಬೇಕಾದ ಗ್ಯಾಸ್‌ನಲ್ಲಿ ಶೇ.50ರಷ್ಟು ಗ್ಯಾಸ್ ಪೂರೈಕೆ ಮಾಡುವುದಾಗಿ ಮುನಿಯಪ್ಪ ಹೇಳಿದರು.
ಆಸ್ಪತ್ರೆ, ಇಂಡಸ್ಟ್ರಿಗಳಿಗೆ ಏರ್‌ಲೈನ್ಸ್ ಹಾಗೂ ಇಂದಿರಾ ಕ್ಯಾಂಟೀನ್‌ಗೆ 5,200 ಸಿಲಿಂಡರ್‌ ನೀಡಲಾಗುತ್ತದೆ. ಆಟೋ ರಿಕ್ಷಾಗಳಿಗೆ 2,540 ಸಿಲಿಂಡ‌ರ್ ಪೂರೈಕೆ ಮಾಡಲಾಗುತ್ತಿತ್ತು. ಆಟೋಗಳಿಗೆ ಆದ್ಯತೆ ನೀಡಿರುವುದರಿಂದ ಹೋಟೆಲ್‌ಗಳಿಗೆ ಸಮಸ್ಯೆ ಆಗಿದೆ ಎಂದರು. ಇರಾನ್‌ನಿಂದ ಎರಡು ಹಡಗುಗಳು ಶೀಘ್ರದಲ್ಲೇ ಬರಲಿವೆ. ಇದಲ್ಲದೇ ಇನ್ನೂ 10-12 ಹಡಗುಗಳು ಬರುವ ಸೂಚನೆ ಇದ್ದು, ವಾರದ ಬಳಿಕ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ. ಹೋಟೆಲ್‌ಗಳು ಎಲ್‌ಪಿಜಿ ಬದಲಿಗೆ ವಿದ್ಯುತ್ ಸೌವ್ ಬಳಸಿ ಅಗತ್ಯವಿರುವ ತಿಂಡಿ-ತಿನಿಸುಗಳನ್ನು ಮಾತ್ರ ಸಿದ್ದಪಡಿಸಬೇಕು ಎಂದು ಸಲಹೆ ನೀಡಿದರು. ಆದ್ಯತಾ ಸೇವೆಗಳಿಗೆ ಸಮರ್ಪಕವಾಗಿ ಎಲ್‌ಪಿಜಿ ಸಿಲಿಂಡರ್‌ಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಕ್ರಮ ದಾಸ್ತಾನು, ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ನಿಗಾ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.