ಬೆಂಗಳೂರು: ಕಾಂಗ್ರೆಸ್ಸಿಗೆ ರಾಷ್ಟ್ರದ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿ ಮುಖ್ಯ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ಯುದ್ಧದ ವಾತಾವರಣ, ಭಾರತದ ನಿಲುವಿಗೆ ಕಾಂಗ್ರೆಸ್ಸಿನವರು, ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ ಅವರು ಉತ್ತರಿಸಿದರು. ಭಾರತ ಒಂದು ರಾಷ್ಟ್ರವಾಗಿ ರಾಷ್ಟ್ರದ ಹಿತಾಸಕ್ತಿಯನ್ನು ಆಧರಿಸಿ ಸಾಂದರ್ಭಿಕ ನಿಲುವು ತೆಗೆದುಕೊಳ್ಳುತ್ತದೆ. ಅಲಿಪ್ತ ನೀತಿ ಎಂಬುದು ಒಂದು ಕಾಲದಲ್ಲಿ ಭಾರತ ತಾತ್ಕಾಲಿಕವಾಗಿ ಅಳವಡಿಸಿಕೊಂಡ ನೀತಿಯಾಗಿತ್ತು ಎಂದರು. ರಾಷ್ಟ್ರದ ರಕ್ಷಣೆ ವಿಚಾರದಲ್ಲಿ ರಾಷ್ಟ್ರದ ಹಿತಾಸಕ್ತಿಯನ್ನು ಆಧರಿಸಿ ಕಾಲಕಾಲಕ್ಕೆ ಅಗತ್ಯ ಇರುವ ನಿಲುವನ್ನು ಭಾರತವು ತೆಗೆದುಕೊಳ್ಳುತ್ತದೆ. ಆದರೆ, ಕಾಂಗ್ರೆಸ್ಸಿಗೆ ರಾಷ್ಟ್ರದ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿ ಮುಖ್ಯ ಎಂದು ಟೀಕಿಸಿದರು.
ಕಾಂಗ್ರೆಸ್ಸಿಗೆ ಏನು? ಕಳ್ಳನೋ, ಸುಳ್ಳನೋ ತಮ್ಮ ಮತಬ್ಯಾಂಕನ್ನು ರಕ್ಷಿಸಿಕೊಳ್ಳಬೇಕು. ಭಯೋತ್ಪಾದಕ ಆಗಿದ್ದರೂ ಪರವಾಗಿಲ್ಲ. ಅವನ ಬಗ್ಗೆ ಕರುಣೆ ತೋರಿಸಬೇಕು ಎಂಬ ನಿಲುವು. ಬಿಜೆಪಿ ಆ ನಿಲುವನ್ನು ಹೊಂದಿಲ್ಲ. ರಾಷ್ಟ್ರದ ವಿಷಯದಲ್ಲಿ ಕಾಂಗ್ರೆಸ್ಸಿನದು ಒಂದು ನಿಲುವು, ಕಮ್ಯುನಿಸ್ಟರದು ಒಂದು ನಿಲುವು, ಮುಸ್ಲಿಮರದು ಒಂದು ನಿಲುವು ಇರಬಾರದು ಎಂದು ತಿಳಿಸಿದರು.
ಗೂಢಚಾರಿಕೆ, ಫೋನ್ ಟ್ಯಾಪಿಂಗ್ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂದು ಒಬ್ಬರು ಮಾಜಿ ಮುಖ್ಯಮಂತ್ರಿ ಮತ್ತು ಇನ್ನೊಬ್ಬರು ಪ್ರತಿಪಕ್ಷದ ನಾಯಕರು ಹೇಳಿದ್ದಾರೆ. ಅವರಿಗೆ ಸುಳಿವಿದ್ದೇ ಇರುತ್ತದೆ. ಆಧಾರವೂ ಇರುತ್ತದೆ ಎಂದರು. ಮುಖ್ಯಮಂತ್ರಿಗಳೇ, ತಮ್ಮ ಶಾಸಕರ ಫೋನ್ ಟ್ಯಾಪಿಂಗ್ ಮಾಡುವುದರಿಂದ ಅವರ ಯೋಜನೆಗಳೇನು ಎಂದು ತಿಳಿಯಬಹುದು. ನೀವು ಸರಕಾರ ಉಳಿಸಿಕೊಳ್ಳಲು, ಕುರ್ಚಿ ಉಳಿಸಿಕೊಳ್ಳಲು ಅದು ಅನಿವಾರ್ಯವೂ ಇರಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನರ ಭಾವನೆ ತಿಳಿಯಲು ನೀವು ಏನು ಪ್ರಯತ್ನ ಮಾಡುತ್ತಿದ್ದೀರಿ ಎಂದು ಕೇಳಿದರು.