ಏಪ್ರಿಲ್ 5ರಂದು ಸಿಎಸ್‌ಕೆ ಹಾಗೂ ಆರ್‌ಸಿಬಿ ಪಂದ್ಯದ ವೇಳೆ ಚಿನ್ನಸ್ವಾಮಿಯಲ್ಲಿ ʼದೋಸೆ, ಇಡ್ಲಿ, ಚಟ್ನಿ ಹಾಡು ಇದೀಗ ಭಾರಿ ವಿವಾದಕ್ಕೆ ಒಳಗಾಗಿದೆ. ಹಾಡು ಪ್ರಸಾರ ಮಾಡಿದ್ದಕ್ಕಾಗಿ ಆರ್‌ಸಿಬಿ ವಿರುದ್ಧ ಬಿಸಿಸಿಐಗೆ ಸಿಎಸ್‌ಕೆ ದೂರು ನೀಡಿದೆ. ಆರ್‌ಸಿಬಿ ಡಿಜೆ ಉದ್ದೇಶಪೂರ್ವಕವಾಗಿ ಆ ಹಳೆಯ ಹಾಡನ್ನು ಪ್ಲೇ ಮಾಡಿ ಸಿಎಸ್‌ಕೆ ಆಟಗಾರರನ್ನು ಮತ್ತು ತಮಿಳುನಾಡಿನ ಸಂಸ್ಕೃತಿಯನ್ನು ಅವಹೇಳನ ಮಾಡಿದ್ದಾರೆ. ಹೋಮ್ ಟೀಮ್ ಬೆಂಬಲಿಸುವುದು ಸಹಜ, ಆದರೆ ಎದುರಾಳಿ ತಂಡದ ಆಟಗಾರರನ್ನು ಹೀಗಳೆಯುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ದೋಸೆ ಇಡ್ಲಿ” ಹಾಡನ್ನು ವ್ಯಂಗ್ಯದ ರೂಪದಲ್ಲಿ ಬಳಸಿರುವುದು ಆಟಗಾರರ ಮತ್ತು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದೆ. ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದದ್ದು. ಸಿಎಸ್‌ಕೆ ಆಟಗಾರರು ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಆರ್‌ಸಿಬಿ ಡಿಜೆ ಮೈಕ್‌ನಲ್ಲಿ ಕೆಲವು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಕೂಡ ದೂರಿನಲ್ಲಿ ತಿಳಿಸಲಾಗಿದೆ.
2025ರ ವೇಳೆ ಆರ್‌ಸಿಬಿ ನಡೆಸಿದ ಚಿಟ್ ಚಾಟ್ನಲ್ಲಿ “ಚೆನ್ನೈ ಎಂದ ತಕ್ಷಣ ನಿಮ್ಮ ನೆನಪಿಗೆ ಬರುವುದು ಏನು?” ಎಂದು ಕೇಳಲಾಗಿತ್ತು. ಈ ವೇಳೆ ಜಿತೇಶ್ ಶರ್ಮಾ “ದೋಸಾ, ಇಡ್ಲಿ, ಸಾಂಬಾರ್, ಚಟ್ನಿ ಚಟ್ನಿ” ಎಂಬ ಹಾಡನ್ನು ಅತಿರಂಜಿತ ಧಾಟಿಯಲ್ಲಿ ಹಾಡಿದ್ದರು. ಇದಕ್ಕೆ ಪ್ರತಿಯಾಗಿ ಚೆನ್ನೈನ ಚೇಪಾಕ್ ಕ್ರೀಡಾಂಗಣದಲ್ಲಿಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಜಿತೇಶ್ ಶರ್ಮಾ ಔಟಾಗುತ್ತಿದ್ದಂತೆ ಸಿಎಸ್‌ಕೆ ಡಿಜೆ “ದೋಸಾ, ಇಡ್ಲಿ, ಸಾಂಬಾರ್, ಚಟ್ನಿ ಚಟ್ನಿ” ಹಾಡನ್ನು ಪ್ಲೇ ಮಾಡಿ ತಿರುಗೇಟು ನೀಡಿದ್ದರು. ಇದೀಗ ಆರ್‌ಸಿಬಿ ಡಿಜೆ ಸಿಎಸ್‌ಕೆ ಅಭಿಮಾನಿಗಳನ್ನು ಅವಹೇಳನ ಮಾಡಿದ್ದಾರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ಹೀಯಾಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಜಿತೇಶ್ ಶರ್ಮಾ ಅವರನ್ನು ಅವಮಾನಿಸಿದ ಸಿಎಸ್‌ಕೆ ಡಿಜೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.