ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡಸುತಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ, ಜೀವ ರಕ್ಷಕ ಔಷಧಗಳ ಕೊರತೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದಾರೆ.
ಜೀವ ರಕ್ಷಕ ಔಷಧಗಳ ಕೊರತೆ ಉಂಟಾಗಿರುವುದು ಅತ್ಯಂತ ಗಂಭೀರ ವಿಚಾರ. ಬಡ, ರೋಗ ಪೀಡಿತರ ಆರೈಕೆ ಮಾಡಲಾಗದಷ್ಟು ಈ ಸರ್ಕಾರ ರೋಗಪೀಡಿತವಾಗಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಯಾರಸಿಟಮಾಲ್, ಐಬುಪ್ರೊಫೇನ್ ಮತ್ತು ಐವಿ ದ್ರವಗಳಂತಹ ಮೂಲಭೂತ ಔಷಧಿಗಳನ್ನು ಕೂಡ ರೋಗಿಗಳಿಗೆ ನೀಡಲಾಗದಷ್ಟು, ಸುಮಾರು 496 ಅಗತ್ಯ ಔಷಧಿಗಳ ತೀವ್ರ ಕೊರತೆಯ ಪರಿಸ್ಥಿತಿ ನಿರ್ಮಾಣವಾಗಿದೆ.
ರೋಗಿಗಳಿಗೆ ನೀಡಲು ಗ್ಲುಕೋಸ್ ಕೂಡ ಇಲ್ಲದಂತಹ "ಆರೋಗ್ಯ ತುರ್ತುಪರಿಸ್ಥಿತಿ" ಇದ್ದರೂ, ಕುರ್ಚಿ ಕಾಳಗ, ವಿದೇಶ ಪ್ರವಾಸ, ನಿಗಮ ಮಂಡಳಿಗಳ ಅಧ್ಯಕ್ಷರುಗಳಿಗೆ ಸಚಿವ ಸ್ಥಾನಮಾನಗಳಂತಹ ಸ್ವಾರ್ಥ ರಾಜಕೀಯದಲ್ಲೇ ಸರ್ಕಾರ ನಿರತವಾಗಿದೆ. ಬಡವರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಹೈಕೋರ್ಟ್ ಛೀಮಾರಿ ಹಾಕಿದ್ದರೂ ತಿದ್ದಿಕೊಳ್ಳದ ನಿಮ್ಮ ಅಸಲಿಯತ್ತು ಬಹಳ ಗಂಭೀರವಾಗಿ ಬಯಲಾಗಿದೆ.
ವಿಪರ್ಯಾಸವೆಂದರೆ, ಸ್ವತಃ ಔಷಧಿ ಪೂರೈಸುವಲ್ಲಿ ವಿಫಲವಾಗಿರುವ ಈ ಸರ್ಕಾರ, ಕೇವಲ ದ್ವೇಷ ರಾಜಕಾರಣಕ್ಕಾಗಿ, ಪ್ರಧಾನಿ @narendramodi ನೇತೃತ್ವದ ಕೇಂದ್ರ ಸರ್ಕಾರದ ಜನಪ್ರಿಯ ‘ಜನೌಷಧಿ ಕೇಂದ್ರ’ಗಳನ್ನೇ ಮುಚ್ಚಲು ಸಂಚು ರೂಪಿಸುತ್ತಿತ್ತು. ಆದರೆ ಈಗ ವಿಧಿಯಿಲ್ಲದೇ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ತಮ್ಮ ಪೂರೈಕೆ ಅಂತರವನ್ನು ಕಡಿಮೆ ಮಾಡಲು, ಅದೇ ಪ್ರಧಾನಮಂತ್ರಿ ಜನೌಷಧಿ ಯೋಜನೆ ಅಡಿ ಔಷಧಿಗಳನ್ನು ಖರೀದಿಸಲು ಮಧ್ಯಂತರ ವ್ಯವಸ್ಥೆಯ ಪ್ರಸ್ತಾವ ಸಲ್ಲಿಸಿದೆ. ತಕ್ಷಣವೇ ಆಸ್ಪತ್ರೆಗಳಿಗೆ ಅಗತ್ಯ ಔಷಧಿಗಳನ್ನು ಪೂರೈಸಿ ಮತ್ತು ಜನೌಷಧಿ ಕೇಂದ್ರಗಳ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದನ್ನು ನಿಲ್ಲಿಸಿ ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.