ತುಮಕೂರು: ಬೆಂಗಳೂರಿಗೆ ಹತ್ತಿರ ಇರುವುದರಿಂದ ತುಮಕೂರನ್ನು ಸೇರಿಸಿ ಬೆಂಗಳೂರು ಉತ್ತರ ಜಿಲ್ಲೆಯನ್ನು ರಚಿಸಬೇಕು ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಇಂದು ನಡೆದ ರಾಜ್ಯ ಸರ್ಕಾರದ 3ನೇ ವರ್ಷದ ಸಾಧನ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಮನಗರವನ್ನು ಸೇರಿಸಿಕೊಂಡು ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ರಚಿಸಲಾಗಿದೆ. ಅದೇ ಮಾದರಿಯಲ್ಲಿ ಬೆಂಗಳೂರಿಗೆ ಕೇವಲ 60 ಕಿ.ಮೀ ದೂರದಲ್ಲಿರುವ ತುಮಕೂರನ್ನು ಸೇರಿಸಿ ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ಹಿಂದೆಯೂ ಪರಮೇಶ್ವರ್ ತುಮಕೂರನ್ನು ಸೇರಿಸಿ ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಹೇಳಿದ್ದರು. ಆದರೆ ಈ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಯನ್ನು ಕೈಬಿಟ್ಟಿದ್ದರು. ಇದೀಗ ತಮ್ಮ ಬೇಡಿಎಕಯನ್ನು ಪುನರುಚ್ಚರಿಸಿದ್ದಾರೆ.
ನಮ್ಮದು ಶೂನ್ಯ ಸಾಧನೆ ಎಂದು ಬಿಜೆಪಿಯವರು ಸಾಲು ಸಾಲು ಟೀಕೆ ಮಾಡ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕೊಟ್ಟ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆ. ಒಳ್ಳೆಯ ಆಡಳಿತ, ಜನಪರ ಸರ್ಕಾರ ಕೊಡುತ್ತೇವೆ ಎಂಬ ಭರವಸೆಯನ್ನು ಉಳಿಸಿಕೊಂಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ 3 ವರ್ಷ. ಸಿಎಂ ಸಿದ್ದರಾಮಯ್ಯ 17ನೇ ದಾಖಲೆ ಬಜೆಟ್ ಮಂಡಿಸಿದ್ದಾರೆ. ಪ್ರಣಾಳಿಕೆ ಈಡೇರಿಸಲು ಬಜೆಟ್ ನಲ್ಲಿ ಹಣ ಮೀಸಲಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ. ಎತ್ತಿನ ಹೊಳೆ ಯೋಜನೆಗೆ ರೂ.13,500 ಕೋಟಿ ನೀಡಲಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿ ಉದ್ಯಮಿಗಳು ಆಸಕ್ತಿ ತೋರಿಸುತ್ತಿದ್ದಾರೆ. ನಮ್ಮ ಉತ್ತಮ ಆಡಳಿತದಿಂದಾಗಿಯೇ ವಿದೇಶಿ ಹೂಡಿಕೆ ಹೆಚ್ಚಾಗಿದೆ. ತುಮಕೂರು ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ನಡೆಯುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು.