ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾಗಿ ನವದಂಪತಿ ಗಂಭೀರವಾಗಿ ಗಾಯಗೊಂಡಿರುವ ದುರಂತ ಘಟನೆ ನಗರದ ಯಲಹಂಕ ಠಾಣೆ ವ್ಯಾಪ್ತಿಯ ಚೌಡೇಶ್ವರಿನಗರದಲ್ಲಿ ವರದಿಯಾಗಿದೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಮೂಲದ ರಾಜು (26) ಮತ್ತು ಅವರ ಪತ್ನಿ ಕೃಷ್ಣವೇಣಿ (24) ಗಾಯಗೊಂಡ ದಂಪತಿ. ಇವರಿಬ್ಬರೂ ಕೈಮಗ್ಗ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಗಾಯಗೊಂಡ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷ್ಣವೇಣಿಗೆ ಶೇ.30ರಷ್ಟು ಸುಟ್ಟು ಗಾಯಗಳಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜು ಮತ್ತು ಕೃಷ್ಣವೇಣಿ ಪ್ರೀತಿಸಿ 3 ತಿಂಗಳ ಹಿಂದೆ ಅಂಧ್ರಪ್ರದೇಶದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ವಾರದ ಹಿಂದೆ ಚೌಡೇಶ್ವರಿನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಅಡುಗೆ ಮಾಡಿದ ನಂತರ ಗ್ಯಾಸ್ ಅಫ್ ಮಾಡುವುದನ್ನು ಮರೆತಿದ್ದಾರೆ. ಮರುದಿನ ಬೆಳಗ್ಗೆ ಎದ್ದು ಕೃಷ್ಣವೇಣಿ ಲೈಟ್ ಆನ್ ಮಾಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಫೋಟಗೊಂಡಿದೆ. ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.