2026-07-23 09:07:51

CONGRESS | ಅಯೋಧ್ಯೆ ದೇಣಿಗೆ ಹಗರಣದ ತನಿಖೆ ಸಿಬಿಐಗೆ ಕೊಡಲು ಆಗ್ರಹ ಕೆಪಿಸಿಸಿ ಸಭೆಯಲ್ಲಿ ನಿರ್ಣಯ | SNK

CONGRESS | ಅಯೋಧ್ಯೆ ದೇಣಿಗೆ ಹಗರಣದ ತನಿಖೆ ಸಿಬಿಐಗೆ ಕೊಡಲು ಆಗ್ರಹ ಕೆಪಿಸಿಸಿ ಸಭೆಯಲ್ಲಿ ನಿರ್ಣಯ | SNK

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅಕ್ರಮಗಳ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕೆಪಿಸಿಸಿ ಸಾಮಾನ್ಯ ಸಭೆಯಲ್ಲಿ ಈ ಹಗರಣದ ಕುರಿತು ಸಿಬಿಐ ಮತ್ತು ವಿಶೇಷ ತನಿಖಾ ತಂಡದಿಂ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಗಿದೆ.  ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಂ. ವೀರಪ್ಪ ಮೊಯ್ಲಿ ಸೇರಿದಂತೆ ಹಲವು ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ರಾಜ್ಯದ ಬರ ಪರಿಹಾರ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪ ಹಾಗೂ ಪಕ್ಷದ ಸಾಂಸ್ಥಿಕ ಬದಲಾವಣೆ ಸೇರಿದಂತೆ ಒಟ್ಟು ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ದೇಣಿಗೆ ಹಣದಲ್ಲಿ ಪಾರದರ್ಶಕತೆ ಇಲ್ಲ: ಬಿ. ಕೆ. ಹರಿಪ್ರಸಾದ್ ಕಿಡಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್, ಸಾರ್ವಜನಿಕರು ಭಕ್ತಿಯಿಂದ ನೀಡಿದ ಚಿನ್ನ, ಬೆಳ್ಳಿ ಹಾಗೂ ನಗದು ದೇಣಿಗೆಯ ಲೆಕ್ಕಾಚಾರದಲ್ಲಿ ರಾಮಮಂದಿರ ಟ್ರಸ್ಟ್ ಯಾವುದೇ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ ಎಂದು ಆರೋಪಿಸಿದರು. ಪ್ರಸ್ತುತ ರಚನೆಯಾಗಿರುವ ಎಸ್‌ಐಟಿ ಕೇವಲ ಸಾಮಾನ್ಯ ಉದ್ಯೋಗಿಗಳನ್ನು ಗುರಿಯಾಗಿಸುತ್ತಿದೆಯೇ ಹೊರತು, ಟ್ರಸ್ಟ್‌ನ ಪ್ರಮುಖ ಸದಸ್ಯರನ್ನಲ್ಲ. ಇದು ಸಾರ್ವಜನಿಕರ ನಂಬಿಕೆಗೆ ಬಗೆದ ದ್ರೋಹವಾಗಿದ್ದು, ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈ ಬೃಹತ್ ಅಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಇದರೊಂದಿಗೆ, ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಹಾಗೂ ರಾಜ್ಯದ ಭೀಕರ ಬರಗಾಲದ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ತಕ್ಷಣವೇ 10,000 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂಬ ನಿರ್ಣಯಗಳನ್ನೂ ಸಭೆಯಲ್ಲಿ ಅಂಗೀಕರಿಸಲಾಯಿತು.

ಕೋಮು ಶಕ್ತಿಗಳ ವಿರುದ್ಧ ಸೈದ್ಧಾಂತಿಕ ಹೋರಾಟಕ್ಕೆ ಕರೆ ಸಭೆಯಲ್ಲಿ ಮಾತನಾಡಿದ ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ವೀರಪ್ಪ ಮೊಯ್ಲಿ ಅವರು, ಕೋಮು ಶಕ್ತಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ವಿಶೇಷ ತರಬೇತಿ ಶಿಬಿರಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು. ಇದರೊಂದಿಗೆ ಆಡಳಿತಾತ್ಮಕ ವಿಷಯಗಳಲ್ಲಿ, ವಿಶೇಷವಾಗಿ ಅಧಿಕಾರಿಗಳ ವರ್ಗಾವಣೆಯಂತಹ ಪ್ರಕ್ರಿಯೆಗಳಲ್ಲಿ ಜಾತಿ ಪರಿಗಣನೆಗಳಿಗೆ ಆದ್ಯತೆ ನೀಡಬಾರದು ಎಂಬ ಮಹತ್ವದ ಚರ್ಚೆಗಳು ನಡೆದವು.

ಕಾಂಗ್ರೆಸ್ ಸಂಘಟನೆಗೆ ಹೊಸ ರೂಪ: ಶೀಘ್ರದಲ್ಲೇ ಮೇಜರ್ ಸರ್ಜರಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಬ್ಲಾಕ್ ಕಾಂಗ್ರೆಸ್ ಸಮಿತಿಗಳನ್ನು ಪುನರ್ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಲ್ಲೂ ಮುಖ್ಯವಾಗಿ 10 ವರ್ಷಗಳಿಗಿಂತ ಹೆಚ್ಚು ಕಾಲ ಒಂದೇ ಅಧಿಕಾರದಲ್ಲಿ ಮುಂದುವರಿದಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಪದಾಧಿಕಾರಿಗಳನ್ನು ಬದಲಾಯಿಸಲು ಪ್ರಸ್ತಾಪಿಸಲಾಗಿದೆ. ಪಕ್ಷದ ಸಾಂಸ್ಥಿಕ ಬದಲಾವಣೆಯ ಉಸ್ತುವಾರಿಗಾಗಿ ಬೇರೆ ರಾಜ್ಯಗಳ ವೀಕ್ಷಕರು ಕರ್ನಾಟಕದ ಎಲ್ಲಾ ಬ್ಲಾಕ್‌ಗಳಿಗೆ ಒಂದು ವಾರಗಳ ಕಾಲ ಭೇಟಿ ನೀಡಲಿದ್ದಾರೆ. ಈ ವೀಕ್ಷಕರು ತಳಮಟ್ಟದ ವರದಿ ಪರಿಶೀಲಿಸಿ ಜಿಲ್ಲಾಧ್ಯಕ್ಷ ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಿದ್ದಾರೆ ಎಂದು ಬಿ. ಕೆ. ಹರಿಪ್ರಸಾದ್ ಮಾಹಿತಿ ನೀಡಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.