ಹುಬ್ಬಳ್ಳಿ: ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ನಾರಿ ಶಕ್ತಿ ಅಧಿನಿಯಮ ಜಾರಿಗೊಳಿಸಲು ದೃಢನಿರ್ಧಾರ ಮಾಡಿದ್ದರು. ಆದರೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಲೋಕಸಭೆಯಲ್ಲಿ ಮಸೂದೆ ಅನುಮೋದನೆ ಪಡೆಯದಂತೆ ಷಡ್ಯಂತ್ರ ಮಾಡಿ ಮಸೂದೆ ಅನುಮೋದನೆ ಪಡೆಯದಂತೆ ಸಂಚು ರೂಪಿಸಿದರು ಎಂದು ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಮಹಿಳೆಯರ ಬಗ್ಗೆ ಗೌರವ ಇಲ್ಲವೆಂಬುದು ಇದರಿಂದ ಗೊತ್ತಾಗುತ್ತದೆ ಎಂದು ಆಕ್ಷೇಪಿಸಿದರು. ನಾರಿ ಶಕ್ತಿಗೆ ಹೆಚ್ಚಿನ ಗೌರವ ಸಿಗಬೇಕು. ಲೋಕಸಭೆ, ವಿಧಾನಸಭೆಯಲ್ಲಿ ಶೇ. 33 ಮೀಸಲಾತಿ ಮೂಲಕ ಅವರನ್ನು ಸಮಾಜದ ಮುಂಚೂಣಿಯಲ್ಲಿ ತರಲು ಪ್ರಧಾನಿ ಬಯಸಿದ್ದರು. ಇದನ್ನು ಸಹಿಸಲು ಕಾಂಗ್ರೆಸ್ಸಿನವರಿಗೆ ಆಗುತ್ತಿಲ್ಲವೆಂದಾದರೆ, ಈ ದೇಶದ ಮಹಿಳೆಯರು, ತಾಯಂದಿರು ಮತ್ತು ಸಹೋದರಿಯರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದರು.
ಇವರು ಏನೇ ಷಡ್ಯಂತ್ರ ಮಾಡಿದರೂ ಅತಿ ಶೀಘ್ರದಲ್ಲೇ ಮುಂದೊಂದು ದಿನ ಮತ್ತೊಮ್ಮೆ ಮಸೂದೆಯನ್ನು ಅನುಮೋದಿಸುವ ನಿಟ್ಟಿನಲ್ಲಿ ಮೋದಿ ಅವರು ಯಶಸ್ವಿ ಆಗುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿನ ಉದ್ಧಟತನವನ್ನು ಧಿಕ್ಕರಿಸಿ, ಆ ಪಕ್ಷದ ಬಂಡವಾಳ ಬಯಲು ಮಾಡುವ ನಿಟ್ಟನಲ್ಲಿ ಬಿಜೆಪಿ ಹುಬ್ಬಳ್ಳಿಯಲ್ಲಿ ಮಹಿಳೆಯರ ನೇತೃತ್ವದಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಮುಂದಿನ ಹೋರಾಟದ ಕುರಿತು ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚಿಸಿ ನಿರ್ಧರಿಸುವುದಾಗಿ ಅವರು ಪ್ರಶ್ನೆಗೆ ಉತ್ತರ ನೀಡಿದರು. ಕಮರ್ಷಿಯಲ್ ಸಿಲಿಂಡರ್ ದರ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಜಗತ್ತಿನ ಪರಿಸ್ಥಿತಿ ಏನೆಂದು ಎಲ್ಲರಿಗೂ ತಿಳಿದಿದೆ. ಅಮೆರಿಕ- ಇರಾನ್ ಮಧ್ಯೆ ಯುದ್ಧದಿಂದ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‍ನವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದರಿಂದ ಅವರಿಗೆ ಯಾವುದೇ ಕಾರಣಕ್ಕೂ ಅನುಕೂಲ ಆಗುವುದಿಲ್ಲ ಎಂದರು.