ಬೆಂಗಳೂರು: ಐಎಎಸ್, ಐಪಿಎಸ್, ಐಎಫ್ಎಸ್ ಹುದ್ದೆಗಳಿಗೆ ಛಲ, ಪರಿಶ್ರಮ, ಪ್ರತಿಭೆಯಿಂದ ಮಾತ್ರ ಆಯ್ಕೆಯಾಗಬೇಕೇ ಹೊರತು 'ನೇಮಕಾತಿ'ಯಿಂದ ಅಲ್ಲ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಹೇಳುವ ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಪಡಿಸಿದ್ದಾರೆ.
ರಾಜಾಜಿನಗರದ ಬಿಜೆಪಿ ಶಾಸಕರೂ ಸುರೇಶ್ ಕುಮಾರ್ ಎಸ್ ಅವರು 'ಮೀಸಲಾತಿ' ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿಪ್ರಸಾದ್ ಅವರು ಮೀಸಲತಿ ಏಕೆ ಬೇಕು ಎಂದು ಚರ್ಚೆ ನಡೆಸಿದ್ದಾರೆ.
ಛಲ, ಪರಿಶ್ರಮ, ಪ್ರತಿಭೆಯೇ ಮಾನದಂಡವಾದರೆ ಬಿಜೆಪಿ ಪಕ್ಷದೊಳಗೆ ಎಸ್ ಸಿ ಎಸ್ ಟಿ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾಗಳು ಯಾಕಿವೆ ? ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ವನವಾಸಿ ಕಲ್ಯಾಣ ಸೇರಿದಂತೆ ದಲಿತ-ಆದಿವಾಸಿ ಸಮುದಾಯಕ್ಕೆಂದೇ ಘಟಕಗಳಿದ್ದರೂ ಒಬ್ಬನೇ ಒಬ್ಬ ದಲಿತ-ಆದಿವಾಸಿ ಸ್ವಯಂ ಸೇವಕ ಈವರೆಗೂ ಯಾಕೆ ಸರಸಂಘಚಾಲಕರಾಗಿ ನೇಮಕವಾಗಿಲ್ಲ ? ಆರ್ ಎಸ್ ಎಸ್ ಸರಸಂಘಚಾಲಕ ಹುದ್ದೆಗೆ ಆಂತರಿಕ ಚುನಾವಣೆ ನಡೆಯುತ್ತದೆಯೋ ? ಅಥವಾ 'ಹಿಂಬಾಗಿಲ' ಮೂಲಕ ನೇಮಿಸಲಾಗುತ್ತದೆಯೋ ?
ಇಷ್ಟು ವರ್ಷಗಳ ರಾಜಕೀಯ ಜೀವನದ ಬಳಿಕವೂ ಸುರೇಶ್ ಕುಮಾರ್ ಅವರು '"ಪ್ರಾತಿನಿಧಿತ್ವ" ಎಂದರೇನು ಎಂದು ಅರಿತುಕೊಂಡಿಲ್ಲ ಎಂಬುದು ರಾಜಕರಾಣದ ದುರಂತವೇ ಸರಿ. ಪ್ರಾತಿನಿಧಿತ್ವ ಎಂದರೆ ಕೇವಲ ಸಂಖ್ಯೆಯ ಪ್ರಶ್ನೆಯಲ್ಲ; ಅದು ಅನುಭವ, ಹಿನ್ನೆಲೆ, ವರ್ಗ ಮತ್ತು ಸಮುದಾಯದ ಬದುಕು ಅರಿತಿರುವ ವ್ಯಕ್ತಿಗಳು ನಿರ್ಧಾರ ಪ್ರಕ್ರಿಯೆಯಲ್ಲಿ ಇರಬೇಕೆಂಬ ತತ್ವ. ಆಡಳಿತ ವ್ಯವಸ್ಥೆ ಒಂದು ನಿರ್ದಿಷ್ಟ ವರ್ಗದವರ ಕೈಯಲ್ಲಿ ಹೆಚ್ಚು ಕೇಂದ್ರೀಕೃತವಾಗಿದ್ದರೆ, ಸರ್ಕಾರದ ನೀತಿಗಳು ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಇದು ಹೊರತಳ್ಳುವಿಕೆಯ ಸೂಕ್ಷ್ಮ ರೂಪ.
ಹಾಗಾಗಿಯೇ ಪ್ರತಿಭೆ/ ಮೆರಿಟ್ ಬಗ್ಗೆ ನಾವು ಚರ್ಚಿಸಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಅವರು ಹುದ್ದೆ ಪಡೆಯುತ್ತಾರೆ ಎಂದು ಸುರೇಶ್ ಕುಮಾರ್ ಅಂತವರು ವಾದಿಸುತ್ತಾರೆ. ಆದರೆ ಮೆರಿಟ್/ಪ್ರತಿಭೆ ಎಂಬುದು ಶೂನ್ಯದಲ್ಲೋ ಆಕಾಶದಲ್ಲೋ ಹುಟ್ಟುವುದಿಲ್ಲ. ಉತ್ತಮ ಶಾಲೆಗಳು, ಕೋಚಿಂಗ್, ಭಾಷಾ ಸಾಮರ್ಥ್ಯ, ಆರ್ಥಿಕ ಭದ್ರತೆ, ವ್ಯಕ್ತಿ ಮತ್ತು ಸಮುದಾಯಗಳ ಸಾಮಾಜಿಕ ಸ್ಥಿತಿಗತಿ, ಸಮುದಾಯಗಳ ಸಾಮಾಜಿಕ ನೆಟ್‌ವರ್ಕ್ ಗಳು ಪ್ರತಿಭೆ/ ಮೆರಿಟ್ ಅನ್ನು ರೂಪಿಸಲು ಪ್ರತ್ಯಕ್ಷ/ಪರೋಕ್ಷವಾಗಿ ಕೆಲಸ ಮಾಡುತ್ತದೆ. ಶತಮಾನಗಳ ಸಾಮಾಜಿಕ ಹಿಂದುಳಿದಿರುವಿಕೆಯನ್ನು ನಿರ್ಲಕ್ಷಿಸಿ, ಕೇವಲ ಅಂತಿಮ ಫಲಿತಾಂಶವನ್ನು “ಮೆರಿಟ್” ಎಂದು ಘೋಷಿಸುವುದು ನೈತಿಕವಾಗಿಯೂ, ಮಾನವೀಯವಾಗಿಯೂ, ಸಂವಿಧಾನಿಕವಾಗಿಯೂ ಸರಿಯಲ್ಲ.
ಭಾರತದ ಜನಸಂಖ್ಯೆಯಲ್ಲಿ OBCಗಳು ಅಂದಾಜು 50–55%, SC ಮತ್ತು ST ಸಮುದಾಯಗಳು ಒಟ್ಟಿಗೆ ಸುಮಾರು 30–35% ಇದ್ದರೂ, ಕೇಂದ್ರ ನಾಗರಿಕ ಸೇವೆಗಳ ಉನ್ನತ ಹುದ್ದೆಗಳಲ್ಲಿ ಅವರ ಪ್ರಮಾಣ ಅಷ್ಟಾಗಿ ಕಾಣಿಸದಿರುವುದು ಒಂದು ವಾಸ್ತವ. ವಿಶೇಷವಾಗಿ IAS, IPS, IFS ಮುಂತಾದ ಸೇವೆಗಳು ದೇಶದ ನೀತಿ ರೂಪಣೆ, ಆಡಳಿತ, ಸಂಪನ್ಮೂಲ ಹಂಚಿಕೆ ಮತ್ತು ಕಾನೂನು ಜಾರಿಯ ಕೇಂದ್ರ ಬಿಂದುಗಳಾಗಿವೆ. ಈ ಹುದ್ದೆಗಳಲ್ಲಿ ಸಮಾನ ಪ್ರತಿನಿಧಿತ್ವವಿಲ್ಲದಿದ್ದರೆ “ಸಾಮಾಜಿಕ ನ್ಯಾಯ” ಎಂಬ ಸಂವಿಧಾನಿಕ ಆದರ್ಶವೇ ಕಾಗದದ ಮೇಲಿನ ಮಾತಾಗಿಬಿಡುತ್ತದೆ. ನನ್ನ ಇಂತಹ ಚರ್ಚೆಯನ್ನು ಶಾಸಕ ಸುರೇಶ್ ಕುಮಾರ್ ಎಸ್ ಅವರು, ಕೇವಲ ರಾಜಕೀಯ ಆರೋಪದ ಮಟ್ಟಕ್ಕೆ ಇಳಿಸಿ, ಮೇಲ್ವರ್ಗವನ್ನು ರಕ್ಷಿಸುವ ಧೋರಣೆಯನ್ನು ತೋರಿಸುತ್ತಾರೆ. ಸುರೇಶ್ ಕುಮಾರ್ ಅವರೇ, 'ಸಮಾಜದಲ್ಲಿ ಯಾರು ಗೆದ್ದರು ಎನ್ನುವುದಕ್ಕಿಂತ ಯಾರಿಗೆ ಗೆಲ್ಲುವ ಅವಕಾಶಗಳಿದ್ದವು?' ಎಂಬುದನ್ನು ನಾವು ನೋಡಬೇಕು.
ಭಾರತದ ಸಂವಿಧಾನವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಮೂಲ ಗುರಿಯೆಂದು ಘೋಷಿಸಿದೆ. ಮೀಸಲಾತಿ ವ್ಯವಸ್ಥೆ ಅದಕ್ಕಾಗಿ ರೂಪಿಸಲಾಯಿತು. ಆದರೆ ಮೀಸಲಾತಿ ನೀತಿ ಇದ್ದರೂ, ಅನುಷ್ಠಾನದಲ್ಲಿ ಅಸಮಾನತೆ ಮುಂದುವರಿದರೆ, ಅದು ವ್ಯವಸ್ಥೆಯಲ್ಲಿನ ಸಮಸ್ಯೆಯ ಸೂಚನೆಯಾಗಿದೆ.
ಸುರೇಶ್ ಕುಮಾರ್ ಅವರೇ, ರಾಷ್ಟ್ರವೆಂದರೆ ಒಂದೇ ವರ್ಗದವರು ಅಧಿಕಾರ ಹಿಡಿಯುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವಲ್ಲ. ಭಾರತವೆಂದರೆ, ಅದು ಸರ್ವ ಜನಾಂಗದ ಶಾಂತಿಯ ತೋಟ. ಹಾಗಾಗಿ ನಮ್ಮ ಭಾರತದ ಆಡಳಿತದಲ್ಲೂ ಸರ್ವ ಜನಾಂಗವಿರಬೇಕು ಎಂದು ತಿರುಗೇಟು ನೀಡಿದ್ದಾರೆ.