ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಖಾರ (ಜಿಬಿಎ) ವ್ಯಾಪ್ತಿಯ ಐದುನಗರ ಪಾಲಿಕೆಗಳ ಚುನಾವಣೆ ಕುರಿತು ಬೆಂಗಳೂರಿನ ಶಾಸಕರು ಹಾಗೂ ಸಂಸದರ ಜೊತೆ ಇಂದು ಸಭೆ ನಡೆಯಿತು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಈ ಸಭೆಯಲ್ಲಿ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಸಭೆಯ ನಂತರ ಮಾತನಾಡಿದ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಯಾವತ್ತೇ ಜಿಬಿಎ ಚುನಾವಣೆ ನಡೆದರೂ ನಾವು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ ಪಕ್ಷದ ತಂತ್ರ- ಕುತಂತ್ರದ ನಡುವೆಯೂ 5 ಪಾಲಿಕೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲು ಒಳ್ಳೆಯ ಅವಕಾಶವಿದೆ. ಹಾಗಾಗಿ ಅತಿ ಶೀಘ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನೂ ಆರಂಭಿಸಬೇಕು. ಜೆಡಿಎಸ್ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಪಡೆದುಕೊಂಡು ಚುನಾವಣೆಗೆ ಸಜ್ಜಾಗಲು ನಿರ್ಧರಿಸಿದ್ದಾಗಿ ವಿವರಿಸಿದರು.
ಫೆ. 28 ಮತ್ತು ಮಾರ್ಚ್ 1ರಂದು 5 ಪಾಲಿಕೆಗಳ ಮುಖಂಡರಗಳ ಪ್ರತ್ಯೇಕ ಸಭೆ ಕರೆಯಬೇಕು. ಆ ಸಭೆಯಲ್ಲಿ ನಮ್ಮ ಪಕ್ಷದ ಹಿರಿಯರೆಲ್ಲರೂ ಇರುತ್ತಾರೆ. ಸ್ಥಳೀಯವಾಗಿ ಕಾರ್ಯಕರ್ತರ ಅಭಿಪ್ರಾಯ, ಸಲಹೆ ಪಡೆಯಲಾಗುವುದು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ಚರ್ಚೆ ಮಾಡಿ, ಮುನ್ನಡೆಯುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಮಾಡಿದ್ದಾಗಿ ತಿಳಿಸಿದರು.
ಬೆಂಗಳೂರು ಮಹಾನಗರ ಗಾರ್ಡನ್ ಸಿಟಿ ಇದೀಗ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಯಾಗಿದೆ. ಉಸ್ತುವಾರಿ ಸಚಿವರು ಅಥವಾ ಕಾಂಗ್ರೆಸ್ ಸರಕಾರವು ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಮಹಾನಗರಕ್ಕೆ ಆದ್ಯತೆ ನೀಡಿಲ್ಲ ಎಂಬುದು ಚರ್ಚೆಗೆ ಒಳಪಟ್ಟಿದೆ. ಬೆಂಗಳೂರು ಮಹಾನಗರ ಕೇವಲ ಭಾರತದಲ್ಲಷ್ಟೇ ಅಲ್ಲ; ಜಗತ್ತಿನಲ್ಲಿ ಹೆಸರುವಾಸಿಯಾಗಿದೆ. ಆದ್ದರಿಂದ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ನುಡಿದರು.
ಟನೆಲ್ ರೋಡ್ ಬಗ್ಗೆ ಮಾತನಾಡುತ್ತಾರೆ. ಈ ಸರಕಾರಕ್ಕೆ ಒಂದು ಗುಂಡಿ ಮುಚ್ಚಲೂ ಆಗುತ್ತಿಲ್ಲ ಎಂದು ಟೀಕಿಸಿದರು. ಭ್ರಷ್ಟಾಚಾರ, ಬೆಲೆ ಏರಿಕೆ ನಡೆದಿದೆ. ಇದೆಲ್ಲದರ ಪರಿಣಾಮವಾಗಿ ಬೆಂಗಳೂರು ಮಹಾನಗರದ ಜನತೆ ಕಾಂಗ್ರೆಸ್ ಸರಕಾರದ ಬಗ್ಗೆ ಬೇಸತ್ತಿದ್ದಾರೆ. ಮತ್ತೊಂದು ಕಡೆ ಡಿಕೆ ಶಿವಕುಮಾರ್ ಅವರ ನಡವಳಿಕೆಯನ್ನು ತಾವೇ ಗಮನಿಸಿದ್ದೀರಿ. ಅಪಾರ್ಟ್‍ಮೆಂಟ್ ವೆಲ್ಫೇರ್ ಅಸೋಸಿಯೇಷನ್‍ನವರು ಭೇಟಿ ಮಾಡಿದಾಗ ಅವರು ಮಾತನಾಡಿದ ಧಾಟಿ- ಇವೆಲ್ಲವನ್ನೂ ಜನರು ಗಮನಿಸುತ್ತಿದ್ದಾರೆ ಎಂದು ಗಮನ ಸೆಳೆದರು.
ಸಭೆಯಲ್ಲಿ ಜಿಬಿಎ ಚುನಾವಣೆ ಉಸ್ತುವಾರಿ ರಾಮ್ ಮಾಧವ್, ಸಹ-ಉಸ್ತುವಾರಿಗಳಾದ ಸತೀಶ್ ಪೂನಿಯಾ, ಸಂಜಯ್ ಉಪಾಧ್ಯಾಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ನಗರದ ಸಂಸದರು, ಶಾಸಕರು, ಹಿಂದಿನ ಮೇಯರ್ ಗಳು, ಉಪ ಮೇಯರ್ ಗಳು, ಕಾರ್ಪೊರೇಟರ್ ಗಳು, ಹಿರಿಯ ಕಾರ್ಯಕರ್ತರು ಭಾಗವಹಿಸಿದ್ದರು.