ಮೈಸೂರು:ಗ್ಯಾರಂಟಿಗಳ ಮೂಲಕ ಕೊಡುವ ಸಹಾಯಕ್ಕಿಂತ ತೆರಿಗೆ ಮತ್ತು ಬೆಲೆ ಏರಿಸಿ ಲೂಟಿ ಮಾಡುತ್ತಿರುವ ಪ್ರಮಾಣವೇ ಹೆಚ್ಚು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನರೊಂದಿಗೆ ಜನತಾದಳ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ನಾಯಕರು ಅಪಪ್ರಚಾರ ನಡೆಸುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಎಷ್ಟು ಬಾರಿ ಬೆಲೆ ಏರಿಕೆ ಮಾಡಿದೆ? ಯಾವ ಯಾವ ಬಾಬತ್ತುಗಳು ಮೇಲೆ ಎಷ್ಟೆಷ್ಟು ತೆರಿಗೆ ವಿಧಿಸಿದೆ ಎಂಬ ಅಂಕಿಅಂಶಗಳನ್ನು ಸಾರ್ವಜನಿಕರ ಮುಂದಿಡಿ ಎಂದೂ ಅವರು ತಾಕೀತು ಮಾಡಿದರು.
ಮದ್ಯ, ಬಸ್ಸು, ವಿದ್ಯುತ್ ಸೇರಿದಂತೆ ಅನೇಕ ಬಾಬತ್ತುಗಳ ಮೇಲೆ ನಿರಂತರವಾಗಿ ತೆರಿಗೆ ವಿಧಿಸಿ ಬೆಲೆ ಏರಿಕೆ ಮಾಡಲಾಗಿದೆ. ಒಂದೆಡೆ ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಜನರ ಮೂಗಿಗೆ ತುಪ್ಪ ಸವದುತ್ತಿರುವ ಸರ್ಕಾರವು ಮತ್ತೊಮ್ಮೆ ಅದಕ್ಕೂ ಮೀರಿ ಬೆಲೆ ಏರಿಕೆ ಮಾಡುತ್ತಿದೆ. ಬರುವ 19ರಂದು ಸಾಧನಾ ಸಮಾವೇಶ ಮಾಡಲು ಹೊರಟಿರುವ ಕಾಂಗ್ರೆಸ್ ನಾಯಕರು ರಾಜ್ಯದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ:
ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ನಾನು ಪ್ರಚಾರಕ್ಕಾಗಿ ನೊಂದ ಜನರಿಗೆ ನೆರವು ನೀಡುತ್ತಿಲ್ಲ. ಗ್ಯಾರಂಟಿಗಳಿಂದ ಜನರು ನೆಮ್ಮದಿಯಿಂದ ಇದ್ದಾರೆಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಅದು ತಪ್ಪು. ಕಾಂಗ್ರೆಸ್ ನಾಯಕರು ಪ್ರತಿದಿನ ನನ್ನ ಮನೆಯ ಬಳಿ ಬಂದು ನೋಡಿದರೆ ಜನರ ಸ್ಥಿತಿ ಯಾವ ರೀತಿ ಇದೆ ಎಂಬುದು ಮನವರಿಕೆ ಆಗುತ್ತದೆ ಎಂದರು.
75 ಕ್ಷೇತ್ರ ಗೆಲುವಿನ ಗುರಿ:
ಮುಂಬರುವ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ಈಗಲೇ ಕಾರ್ಯಕರ್ತರ ಪಡೆಗೆ ಕರೆ ಕೊಟ್ಟ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 75 ಕ್ಷೇತ್ರಗಳಲ್ಲಿ ಜಯ ಗಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, 2028ರ ಚುನಾವಣೆಯಲ್ಲೂ ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ ಎಂದರು.
ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಟ್ಟು ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂದು ಮನವರಿಕೆ ಮಾಡಿಕೊಡಲು ಸಮಾವೇಶ ಮಾಡಿದ್ದೇವೆ ಎಂದು ಅವರು ಒತ್ತಿ ಹೇಳಿದರು. ನಮ್ಮ ಪಕ್ಷಕ್ಕೆ ಲಕ್ಷಾಂತರ ಮಂದಿ ನಿಷ್ಠಾವಂತ ಕಾರ್ಯಕರ್ತರು ಬೆನ್ನೆಲುಬಾಗಿದ್ದಾರೆ. ಕಾರ್ಯಕರ್ತರ ಶ್ರಮದ ಫಲವಾಗಿ ಇಂದಿಗೂ ಜೆಡಿಎಸ್ ಪ್ರಬಲವಾಗಿ ಉಳಿದಿದೆ ಎಂರು.
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕರಾದ ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್, ಮಾಜಿ ಮೇಯರ್ ರವಿ ಸೇರಿದಂತೆ ಅನೇಕ ಹಿರಿಯ ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು.