2026-03-07 08:08:46

Congress land thieves distorted view on Mysore Silk land | ಮೈಸೂರು ಸಿಲ್ಕ್ ಭೂಮಿಯ ಮೇಲೆ ಕಾಂಗ್ರೆಸ್ ಭೂಗಳ್ಳರ ವಕ್ರದೃಷ್ಟಿ ಆರ್ ಅಶೋಕ ಕಿಡಿ | Speed News Kannada

Congress land thieves distorted view on Mysore Silk land | ಮೈಸೂರು ಸಿಲ್ಕ್ ಭೂಮಿಯ ಮೇಲೆ ಕಾಂಗ್ರೆಸ್ ಭೂಗಳ್ಳರ ವಕ್ರದೃಷ್ಟಿ ಆರ್ ಅಶೋಕ ಕಿಡಿ | Speed News Kannada

ಬೆಂಗಳೂರು: ರಾಜ್ಯದ ಹೆಮ್ಮೆಯ ಪಾರಂಪರಿಕ ಪ್ರತೀಕವಾದ 'ಮೈಸೂರು ಸಿಲ್ಕ್' ಅಸ್ತಿತ್ವಕ್ಕೆ ಕಾಂಗ್ರೆಸ್ ಸರ್ಕಾರ ಸಂಚಕಾರ ತಂದಿದೆ. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (KSIC) ವ್ಯವಸ್ಥಾಪಕ ನಿರ್ದೇಶಕರು ಈ ಜಾಗ ನಮಗೆ ಅತ್ಯಗತ್ಯ ಎಂದು ಅಂಕಿ-ಅಂಶಗಳ ಸಮೇತ ತಾಂತ್ರಿಕ ವರದಿ ನೀಡಿದ್ದರೂ, ಕಾಂಗ್ರೆಸ್ ಸರ್ಕಾರ ಆ ಭೂಮಿಯನ್ನು ಕಬಳಿಸಲು ಹಠಕ್ಕೆ ಬಿದ್ದಿರುವುದು ಅತ್ಯಂತ ಖಂಡನೀಯ ಮತ್ತು ಈ ನಡೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಕಿಡಿ ಕಾರಿದ್ದಾರೆ.
'ಮೈಸೂರು ಸಿಲ್ಕ್' ಉದ್ಯಮವನ್ನು ಹೊಸಕಿ ಹಾಕಲೆಂದೇ ಕಾಂಗ್ರೆಸ್ ಸರ್ಕಾರ ರೇಷ್ಮೆ ನಿಗಮದ ಜಾಗಕ್ಕೆ ಕೈಹಾಕಿದೆ. ಟಿ.ನರಸೀಪುರದ KSIC ಘಟಕದ ಮುಂದಿನ ಅಭಿವೃದ್ಧಿಗೆ, ಮಾಲಿನ್ಯ ನಿಯಂತ್ರಣ ಘಟಕ (ETP) ಸ್ಥಾಪನೆಗೆ ಮತ್ತು ಹೆಚ್ಚುವರಿ ಉತ್ಪಾದನೆಗೆ ಆ 5 ಎಕರೆ ಜಾಗ ಅತ್ಯಗತ್ಯ ಎಂದು ಸ್ವತಃ ವ್ಯವಸ್ಥಾಪಕ ನಿರ್ದೇಶಕರೇ ವರದಿ ನೀಡಿದ್ದಾರೆ. ಹೀಗಿದ್ದರೂ ಆ ಜಾಗವನ್ನು ಕ್ರೀಡಾಂಗಣದ ಹೆಸರಿನಲ್ಲಿ ಕಿತ್ತುಕೊಳ್ಳಲು ಸರ್ಕಾರ ಹಠಕ್ಕೆ ಬಿದ್ದಿರುವುದು ಯಾರ ಹಿತಾಸಕ್ತಿಗಾಗಿ ಎಂದು ಅಶೋಕ್‌ ಪ್ರಶ್ನಿಸಿದ್ದಾರೆ.
ರೇಷ್ಮೆ ನೂಲು ತೆಗೆಯುವ ಘಟಕಕ್ಕೆ ಪ್ರತಿ ದಿನ 5 ಲಕ್ಷ ಲೀಟರ್ ನೀರು ಬೇಕು. ಕ್ರೀಡಾಂಗಣ ನಿರ್ಮಾಣವಾದರೆ ನೀರಿನ ಪೈಪ್‌ಲೈನ್‌ಗಳಿಗೆ ಧಕ್ಕೆಯಾಗುತ್ತದೆ, ಇದರಿಂದ ಇಡೀ ಘಟಕವೇ ಸ್ಥಗಿತಗೊಳ್ಳುವ ಅಪಾಯವಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಆದರೂ ಸಿಎಂ ಅವರಿಗೆ ಈ ವರದಿಗಿಂತ ಭೂಮಿ ಕಬಳಿಸುವುದೇ ಮುಖ್ಯವಾಯಿತೇ ಎಂದು ಕೇಳಿದ್ದಾರೆ.
ಆ ಜಾಗವನ್ನು ಕಿತ್ತುಕೊಂಡರೆ ಕಾರ್ಖಾನೆ ಕಾನೂನುಬಾಹಿರವಾಗಿ ಮುಚ್ಚುವ ಸ್ಥಿತಿಗೆ ಬರುತ್ತದೆ. ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಇವತ್ತು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಮೈಸೂರು ಸಿಲ್ಕ್ ಎಂಬ ನಮ್ಮ ಹೆಮ್ಮೆಯ ಬ್ರಾಂಡ್ ಅನ್ನು ಉಳಿಸಿ, ಬೆಳೆಸುವ ಬದಲು, ಅದಕ್ಕೆ ಕೊಡಲಿ ಪೆಟ್ಟು ಕೊಡುತ್ತಿರುವುದು ನಾಡದ್ರೋಹಿ ಕಾಂಗ್ರೆಸ್ ಸರ್ಕಾರದ 'ಜನವಿರೋಧಿ', ನೀತಿಯ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.