ನವದೆಹಲಿ: ದೆಹಲಿಯಲ್ಲಿ ಇಂದು ಕೊನೆಗೊಳ್ಳುತ್ತಿರುವ ಎಐ ಇಂಪ್ಯಾಕ್ಟ್ ಸಮ್ಮೇಳನದಲ್ಲಿ (AI Impact Summit) ಹತ್ತು ಮಂದಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಯುವ ಕಾಂಗ್ರೆಸ್ ನ 10 ಕಾರ್ಯಕರ್ತರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಮೋದಿ ಅವರು ಎಐ ಸಮಿಟ್ನಲ್ಲಿ ದೇಶವನ್ನು ಮಾರಿದ್ದಾರೆ ಎಂದು ಪ್ರತಿಭಟಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶವನ್ನು ಬೆತ್ತಲುಗೊಳಿಸಲು ಹೋಗಿ ಕಾಂಗ್ರೆಸ್ ತಾನೇ ಬೆತ್ತಲಾಗಿದೆ ಎಂದು ಕೆಲವರು ಟೀಕಿಸಿದ್ದಾರೆ.
ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಪ್ರತಿಕ್ರಿಯೆ ನೀಡಿ ದೇಶ ಪ್ರಗತಿ ಸಾಧಿಸುವುದು ಕೆಲವರಿಗೆ ಇಷ್ಟವಿಲ್ಲ. ಭಾರತ ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಅಡ್ಡಿಪಡಿಸುವುದು ಪ್ರಗತಿಯನ್ನು ತಡೆಯುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.
AI ಶೃಂಗಸಭೆಯಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ ನಡೆಸುತ್ತಿರುವ ನಿಮ್ಮ ಯುವ ಕಾಂಗ್ರೆಸ್ ಭಾರತದ 1.4 ಶತಕೋಟಿ ಜನರಿಗೆ ಮಾಡಿದ ಅವಮಾನ. ಇಂತಹ ತಂತ್ರಗಳು ನಿಮ್ಮ ಮತ್ತು ನಿಮ್ಮ ಪಕ್ಷದ ದೂರದೃಷ್ಟಿಯ ಕೊರತೆಯನ್ನು ಪ್ರತಿಬಿಂಬಿಸುತ್ತವೆ ಎಂದೂ ಹೇಳಿದ್ದಾರೆ.