ಬೆಂಗಳೂರು: ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಇದ್ದ ಕಾಂಗ್ರೆಸ್, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸ್ಥಾನ ಪಡೆದ ಕೂಡಲೇ ರಾತ್ರೋರಾತ್ರಿ ಆ ಪಕ್ಷದ ಮುಂದೆ ಹೋಗಿ ಸಚಿವ ಸ್ಥಾನಕ್ಕೆ ಭಿಕ್ಷೆ ಬೇಡುತ್ತಿದೆ. ಡಿಎಂಕೆ ಸಖ್ಯ ಬಿಟ್ಟ ಕಾಂಗ್ರೆಸ್ ಸ್ಥಿತಿ ಭಿಕ್ಷುಕರ ರೀತಿ ಆಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಇಂತಹ ಹೀನಾಯ ಸ್ಥಿತಿ ಬರಬಾರದಿತ್ತು. ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವವಾದ ಜಯ ಸಿಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಿದ್ದಾರೆ. ಆ ರಾಜ್ಯದಲ್ಲಿ ಟಿಎಂಸಿ ಆಡಳಿತದಲ್ಲಿ ಜನರು ನರಕಯಾತನೆ ಅನುಭವಿಸುತ್ತಿದ್ದರು. ಆ ನರಕದಿಂದ ಮೋದಿ ಅವರು ಜನರನ್ನು ಹೊರತಂದಿದ್ದಾರೆ. ಈ ಬಾರಿಯೂ ಬಿಜೆಪಿ ಗೆಲ್ಲದೇ ಇದ್ದಿದ್ದರೆ ಅಲ್ಲಿನ ಜನರ ಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿ ಎಂದರು.
ಅಸ್ಸಾಂ ಮತ್ತು ಪುದುಚೇರಿಯಲ್ಲಿ ಪಕ್ಷಕ್ಕೆ ಜನ ಬೆಂಬಲ ನೀಡಿದ್ದಾರೆ. ತಮಿಳುನಾಡು ಮತ್ತು ಕೇರಳದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಬೆಂಬಲದಿಂದ ಮತಬ್ಯಾಂಕ್ ಹೆಚ್ಚಿಸಿಕೊಂಡಿದ್ದೇವೆ. ಇನ್ನೂ ಅಲ್ಲಿ ಮುಂದಿನ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಂತೆ ಬಿಜೆಪಿ ಶಕ್ತಿ ಹೆಚ್ಚಲಿದೆ. ಸ್ವತಂತ್ರ ಸರ್ಕಾರ ಮಾಡುವ ಶಕ್ತಿಯನ್ನು ಜನರು ಕೊಡುತ್ತಾರೆ ಎಂದು ಹೇಳಿದರು.
ಬಿಜೆಪಿ ಜೊತೆ ನಿಂತ ಎಸ್ ಸಿ ಸಮುದಾಯ:
ಈ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ವರ್ಗದ ಜನ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‌ಗೆ ಮುಸ್ಲಿಮರು ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಅವಕಾಶ ನೀಡಿದೆ. ಕರ್ನಾಟಕದಲ್ಲಿ ಮುಂದೆ ನಡೆಯುವ ಚುನಾವಣೆಯಲ್ಲಿ ಕೂಡ ಪರಿಶಿಷ್ಟ ಜಾತಿ ವರ್ಗಗಳು ಬಿಜೆಪಿಗೆ ಜೊತೆ ನಿಲ್ಲಲಿದ್ದಾರೆ. ಇಲ್ಲಿಯೂ ಕಾಂಗ್ರೆಸ್ ಗೆ ಪಾಠ ಕಲಿಸಬೇಕು ಎಂದು ಮುಸ್ಲಿಂ ಸಮುದಾಯಗಳು ನಿರ್ಧರಿಸಿವೆ ಎಂದರು.
ಹಣವಿಲ್ಲದೆ ಜಿಬಿಎ ಚುನಾವಣೆ ಹೇಗೆ?:
ಜಿಬಿಎ ಚುನಾವಣೆ ಬರುತ್ತಿದೆ. ಆದರೆ ಹಣವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಚುನಾವಣೆಗೂ ಹಣವಿಲ್ಲದವರು ಸರ್ಕಾರ ಹೇಗೆ ನಡೆಸುತ್ತಾರೆ. ಆದರೆ ಗುಂಡಿ ಮುಚ್ಚಲು ಮಾತ್ರ ಸಾವಿರಾರು ಕೋಟಿ ಹಣ ವ್ಯಯಿಸುತ್ತಾರೆ. ಇದು ಹೇಗೆ ಎಂದು ಪ್ರಶ್ನಿಸಿದರು. 2025-26 ರಲ್ಲಿ ಡಾಂಬರೀಕರಣ, ರಸ್ತೆ ಗುಂಡಿ ಮುಚ್ಚಲು 1040 ಕೋಟಿ ಖರ್ಚು ಮಾಡಿದ್ದಾರೆ. ಯಾವುದಕ್ಕೂ ಲೆಕ್ಕವೇ ಇಲ್ಲ. ಸರಿಯಾಗಿ ರಸ್ತೆ ಗುಂಡಿ ಮುಚ್ಚಲು ಆಗದವರು ಬೆಂಗಳೂರನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂದರು.
ಕಸ ವಿಲೇವಾರಿಗೆ ಪ್ಯಾಕೇಜ್ ಮಾಡಿ ಟೆಂಡರ್ ಮಾಡಿದ್ದಾರೆ. ಗುತ್ತಿಗೆದಾರರನ್ನು ಕರೆದು ಮಾತುಕತೆ ನಡೆಸಿ ರೇಟ್ ಕೋಟ್ ಮಾಡಿದ ಮೇಲೆ ಪರ್ಸಂಟೇಜ್ ವ್ಯವಹಾರ ನಡೆದಿದೆ. ಜಿಬಿಎ ಚುನಾವಣೆಗೆ ಗುತ್ತಿಗೆದಾರರಿಂದಲೇ ಹಣ ವಸೂಲಿ ಮಾಡ್ತೀರಾ ಎಂದು ಪ್ರಶ್ನಿಸಿದರು.