ಬೆಂಗಳೂರು: ಗ್ರೇಟರ್ ಬೆಂಗಳೂರು (ಜಿಬಿಎ) ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಗೆಲ್ಲುವ ಭರವಸೆ ಇಲ್ಲದ ಕಾರಣ ಪದೇ ಪದೇ ಚುನಾವಣೆಯನ್ನು ಮುಂದಕ್ಕೆ ಹಾಕುವ ನಾಟಕವಾಡುತ್ತಿದೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಪಾದಿಸಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಜಿಬಿಎ ಚುನಾವಣೆಗೆ 2 ತಿಂಗಳು ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಮೂರು ತಿಂಗಳು ಕಾಲಾವಕಾಶವನ್ನು ಸರ್ಕಾರ ಕೇಳಿತ್ತು. ಕಾಂಗ್ರೆಸ್ ಚುನಾವಣೆ ಬಗ್ಗೆ ಸಮೀಕ್ಷೆ ಮಾಡಿಸಿದ್ದು, ಗೆಲುವಿನ ಭರವಸೆ ಸಿಕ್ಕಿಲ್ಲ. ಹಾಗಾಗಿ ಚುನಾವಣೆಯನ್ನು ಮುಂದಕ್ಕೆ ಹಾಕಲು ನೋಡಿದ್ದರು ಎಂದು ದೂರಿದರು.
ಸೋಲು- ಗೆಲುವು ರಾಜಕೀಯದಲ್ಲಿ ಇದ್ದಿದ್ದೇ. ಒಂದು ಸಾರಿ ನಾವು ಗೆಲ್ಲಬಹುದು. ಇನ್ನೊಂದು ಬಾರಿ ಬೇರೆಯವರು ಗೆಲ್ಲಬಹುದು. ಆದರೆ ಯಾರೂ ವ್ಯವಸ್ಥೆಯನ್ನು ಕೆಡಿಸುವ ಕೆಲಸವನ್ನು ಮಾಡಬಾರದು. ಆದ್ದರಿಂದ ಕೋರ್ಟ್ ಆದೇಶವನ್ನು ಗೌರವಿಸಬೇಕು. ಇಲ್ಲದೇ ಹೋದರೆ ಮತ್ತಷ್ಟು ಸೋಲು ಕಾಂಗ್ರೆಸ್‍ಗೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಕರ್ನಾಟಕವನ್ನೇ ತೆಗೆದು ಬೆಂಗಳೂರು ಮಾಡಿ:
ರಾಮನಗರವನ್ನು ಬೆಂಗಳೂರು ದಕ್ಷಿಣ ಮಾಡಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರವನ್ನೂ ಬೆಂಗಳೂರಿಗೆ ಸೇರಿಸುವ ಮಾತು ನಡೆಯುತ್ತಿದೆ. ಈಗ ತುಮಕೂರನ್ನು ಬೆಂಗಳೂರಿಗೆ ಸೇರಿಸಲು ಸರ್ಕಾರ ಹುನ್ನಾರ ನಡೆಸಿದೆ. ನಾಡಪ್ರಭು ಕೆಂಪೇಗೌಡ ಅವರ ನಿರ್ಮಿಸಿದ ಬೆಂಗಳೂರನ್ನು ಐದು ತುಂಡು ಮಾಡಿದ್ದೀರಿ. ಈ ರೀತಿ ಎಲ್ಲವನ್ನೂ ಬದಲಾಯಿಸುವ ಬದಲು ಇಡೀ ಕರ್ನಾಟಕವನ್ನೇ ತೆಗೆದು ಬೆಂಗಳೂರು ಎಂದು ಮಾಡಿದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಅಖಂಡ ಕರ್ನಾಟಕ ಎಂಬುದು ನಮ್ಮ ಅಸ್ಮಿತೆ. ಅದರಲ್ಲಿ ಜಿಲ್ಲೆಯ ಹೆಸರುಗಳು, ತಾಲೂಕುಗಳು ಸಹಜವಾಗಿ ಇರುತ್ತವೆ. ಅದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಅದನ್ನು ಇದನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಲ್ಲಾ ಏಕೆ. ಇದೆಲ್ಲ ಮೂಗಿಗೆ ತುಪ್ಪ ಸವರುವ ಕೆಲಸ ಎಂದರು.
ಬೆಂಗಳೂರನ್ನು ವಿಸ್ತಾರವಾಗಿ ಬೆಳೆಸುವ ಬದಲು ತುಮಕೂರು, ಕೋಲಾರ ಮೈಸೂರನ್ನು ಬೆಳೆಸಲು ಮೂಲಸೌಕರ್ಯ ಮತ್ತು ಸೌಲಭ್ಯ ನೀಡಿ. ಆನೇಕಲ್‍ನಲ್ಲಿ ರೈತರ ಫಲವತ್ತಾದ ಜಮೀನನ್ನು ಗೃಹ ಮಂಡಳಿ ಹೆಸರಲ್ಲಿ ಕ್ರಿಕೆಟ್ ಸ್ಟೇಡಿಯಂ ಮಾಡ್ತಾ ಇದ್ದಾರೆ. ಮನೆಗಳನ್ನು ನಿರ್ಮಿಸಲು ರೈತರಿಂದ ಜಮೀನು ಪಡೆದು ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಇದು ಲೂಟಿಗಾಗಿ ಮಾಡುತ್ತಿರುವುದೇ ಹೊರತು ಬೆಂಗಳೂರಿನ ಅಭಿವೃದ್ಧಿಗಾಗಿ ಅಲ್ಲ. ದೂರ ಇರುವ ತುಮಕೂರು ಬೆಳೆಸುವ ಬದಲು ಹತ್ತಿರದ ಪಟ್ಟಣಗಳನ್ನು ಬೆಳೆಸಿ. ಎಲ್ಲಕ್ಕೂ ಬೆಂಗಳೂರು ಹೆಸರು ಕೊಡುವುದು ಹಾಸ್ಯಾಸ್ಪದ ಎಂದು ಗೇಲಿ ಮಾಡಿದರು.