ಬೆಂಗಳೂರು: ಈ ವರ್ಷದ ಆಗಸ್ಟ್ 31ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದೂ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿದೆ. ಈ ಮೂಲಕ ಸರ್ಕಾರಕ್ಕೆ 2 ತಿಂಗಳ ಕಾಲಾವಕಾಶ ಸಿಕ್ಕಿದೆ.
ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗ ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ಕೋರಿ ಸಲ್ಲಿಸಿದ್ದವು. ಈ ಮನವಿ ಆಲಿಸಿದ ಮುಖ್ಯ ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳಲ್ಲಿ, ರಾಜ್ಯ ಸಿಬ್ಬಂದಿ ಜನಗಣತಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್), ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಂಡಳಿ ಪರೀಕ್ಷೆಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಜೂನ್ 30ರಿಂದ ಅನ್ಚಯವಾಗುವಂತೆ ಹೆಚ್ಚುವರಿ ಮೂರು ತಿಂಗಳ ಸಮಯ ನೀಡಬೇಕು ಎಂದು ಮನವಿ ಮಾಡಿದ್ದವು.
ಜತೆಗೆ ಜೂನ್ 30ರೊಳಗೆ ಚುನಾವಣೆಗಳನ್ನು ಪೂರ್ಣಗೊಳಿಸಲು ನಿರ್ದೇಶಿಸಿದ್ದ ಸುಪ್ರೀಂ ಕೋರ್ಟ್‌ನ ಜನವರಿ 12ರ ಆದೇಶವನ್ನು ಮಾರ್ಪಡು ಮಾಡುವಂತೆಯೂ ಕೋರಿದ್ದವು.
ನ್ಯಾಯಾಲಯದ ನಿರ್ದೇಶನದಂತೆ ಚುನಾವಣೆಗಳನ್ನು ಪೂರ್ಣಗೊಳಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆಯೋಗವು ತನ್ನ ಅರ್ಜಿಯಲ್ಲಿ ತಿಳಿಸಿತ್ತು. ಆದರೂ ಕೇಂದ್ರ ಸರ್ಕಾರವು ಜನಗಣತಿಗೆ ಆದೇಶಿಸಿರುವುದರಿಂದ ರಾಜ್ಯ ಸರ್ಕಾರಿ ಅಧಿಕಾರಿಗಳು ವ್ಯಕ್ತಪಡಿಸಿದ ಕಳವಳಗಳು ಮೇಲ್ನೋಟಕ್ಕೆ ನಿಜವೆಂದು ಭಾಸವಾಗುತ್ತವೆ. ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸಹಾಯ ಮಾಡುವ ಜವಾಬ್ದಾರಿಗಳನ್ನುಹೊಂದಿರುವ ಅಧಿಕಾರಿಗಳ ಸಂಪೂರ್ಣ ಸಮಯ ಮತ್ತು ಲಾಜಿಸ್ಟಿಕ್ಸ್ ಅನ್ನು ಎಸ್‌ಐಆರ್ ಆಕ್ರಮಿಸಿಕೊಂಡಿದೆ. ಆದ್ದರಿಂದ, ಚುನಾವಣೆಗಳನ್ನು ನಡೆಸುವಲ್ಲಿ ಕೋರಿದ ಸಮಯ ವಿಸ್ತರಣೆಯು ವಿಶ್ವಾಸಾರ್ಹವಾಗಿದೆ ಎಂದು ಆಯೋಗ ಕೋರ್ಟ್ ಗಮನಕ್ಕೆ ತಂದಿತ್ತು.