ಬೆಂಗಳೂರು: ಕರ್ನಾಟಕಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಬಿಹಾರದ ನಳಂದ ಜಿಲ್ಲೆಯ ರಾಜಗೀರ್ ಪಟ್ಟಣದ ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಕರ್ನಾಟಕದ ಗುಬ್ಬಿ ತಾಲೂಕಿನವರು ಎಂದು ತಿಳಿದು ಬಂದಿದೆ. ಮೃತರನ್ನು ಜಿ.ಆರ್ ಸುಮಂಗಲ (78), ಶಿಲ್ಪಾ ಜಿ.ಆರ್.(48) ಶೃತಿ ಜಿ.ಬಿ (43) ಮತ್ತು ಜಿ.ಆರ್ ನಾಗಪ್ರಸಾದ್ (50) ಎಂದು ಗುರುತಿಸಲಾಗಿದೆ.
ಜನವರಿ 30 ರಂದು ಜಿ.ಅರ್ ನಾಗಪ್ರಸಾದ್ ಹೆಸರಲ್ಲಿ ಕೊಠಡಿ ಪಡೆದಿದ್ದು, ಶುಕ್ರವಾರ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದರಿಂದ ಧರ್ಮಶಾಲೆಯ ಸಿಬ್ಬಂದಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ಬಾಗಿಲು ಒಡೆದು ನೋಡಿದಾಗ ನಾಲ್ವರು ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ
ಮೃತರ ಬಳಿ ಇದ್ದ ವಸ್ತುಗಳಿಂದ ಅಪಾರ ಪ್ರಮಾಣದ ನಿದ್ರೆ ಮಾತ್ರೆಗಳು, ಪತ್ತೆಯಾಗಿವೆ ಎಂದು ಪೋಲೀಸರ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪೊಲೀಸರು ಆಧಾರ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು, ಎಟಿಎಂ ಕಾರ್ಡ್‌ಗಳು, ಇತರ ದಾಖಲೆಗಳು, 1,18,000 ರೂ. ನಗದು ಮತ್ತು ಮೃತರ ವೈಯಕ್ತಿಕ ವಸ್ತುಗಳನ್ನು ಸಹ ಪತ್ತೆಹಚ್ಚಿದ್ದಾರೆ.
"ಕರ್ನಾಟಕ ಪೊಲೀಸರನ್ನು ಸಂಪರ್ಕಿಸಿ, ಗುಬ್ಬಿ (ಗ್ರಾಮೀಣ) ಪೊಲೀಸ್ ಠಾಣೆಯ ಸಹಾಯದಿಂದ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮರಣೋತ್ತರ ವರದಿಯನ್ನು ಸಿದ್ಧಪಡಿಸಿದ ನಂತರ, ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಳಂದ ಜಿಲ್ಲೆಯ ಬಿಹಾರ್ ಶರೀಫ್‌ನಲ್ಲಿರುವ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ವೈದ್ಯಕೀಯ ಮಂಡಳಿಯು ವೀಡಿಯೊಗ್ರಫಿಯೊಂದಿಗೆ ಶವಪರೀಕ್ಷೆಯನ್ನು ನಡೆಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಲು ನಳಂದ ಎಸ್‌ಪಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಈ ಸಂಬಂಧ, ಇಬ್ಬರು ಸದಸ್ಯರ ತಂಡವನ್ನು ಕರ್ನಾಟಕದ ಗುಬ್ಬಿಗೆ ಕಳುಹಿಸಲಾಗಿದೆ.