ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಗೆ ಪ್ರತಿಪಕ್ಷಗಳು ಸೇರಿದಂತೆ ಹೋಟೆಲ್ ಉದ್ಯಮ ಸೇರಿದಂತೆ ಸಾರ್ವಜನಿಕರೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ನಿನ್ನೆ ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ 1993 ಏರಿಕೆಯಾಗಿದೆ. ಈ ಬೆಲೆ ಏರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರ ಜೊಳ್ಳು ವಿದೇಶಾಂಗ ನೀತಿಯ ಫಲವಾಗಿ ದೇಶದ ಆರ್ಥಿಕತೆಯನ್ನು ರಕ್ಷಿಸಲು ವಿಫಲವಾಗಿದೆ.ಇದರಿಂದ ಸಾಮಾನ್ಯ ಭಾರತೀಯರು ಬೆಲೆ ತೆರುತ್ತಿದ್ದಾರೆ ಎಂದು ಟೀಕಿಸಿದರು. ಪಂಚರಾಜ್ಯ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ, ಮೋದಿ ಸರ್ಕಾರ ಎಲ್ ಪಿಜಿ ಬೆಲೆ ಹೆಚ್ಚಿಸಿದೆ. ಚುನಾವಣಾ ಅವಧಿಯಲ್ಲಿ ಬೆಲೆ ಹೆಚ್ಚಳಗಳನ್ನು ತಡೆಹಿಡಿದ ನಂತರ ಈಗ ಬಿಸಿ ಮುಟ್ಟಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋದಿ ಅವರು ಕೇವಲ ನಾಲ್ಕು ತಿಂಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಆರು ಬಾರಿ ಹೆಚ್ಚಿಸಿದ್ದಾರೆ. ಇದು ಆಡಳಿತವಲ್ಲ, ಸಂಘಟಿತ ಲೂಟಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜಾಗತಿಕ ಬಿಕ್ಕಟ್ಟಿನಲ್ಲಿ ದೇಶದ ಜನರನ್ನು ರಕ್ಷಿಸುವ ಬದಲು ಅವರ ಮೇಲೆಯೇ ಹೊರೆಯನ್ನು ವರ್ಗಾಯಿಸುತ್ತಾರೆ. ಬೆಲೆ ಹೆಚ್ಚಳ ಪ್ರತಿಯೊಂದು ಮನೆಯ ಮೇಲೂ ಪರಿಣಾಮ ಬೀರುತ್ತದೆ. ಹೋಟೆಲ್ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತದೆ. ಇದರಿಂದ ನಗರ ಕಾರ್ಮಿಕ , ದಿನಗೂಲಿ, ಸಣ್ಣ ವ್ಯಾಪಾರಿಗಳು ಹೆಚ್ಚು ತೊಂದರೆ ಅನುಭವಿಸುತ್ತಾರೆ ಎಂದು ಹೇಳಿದರು. ಕಾರ್ಮಿಕ ದಿನಾಚರಣೆಯಂದು ಮೋದಿ ಕಾರ್ಮಿಕ ವರ್ಗಕ್ಕೆ ಬರೆ ಎಳೆಯುವಂತ ಉಡುಗೊರೆ ಕೊಟ್ಟಿದ್ದಾರೆ. ಇದು ಆರಂಭ, ಇದು ಮೋದಿ ಮಾದರಿ, ಚುನಾವಣೆಯ ಸಮಯದಲ್ಲಿ ಜನರನ್ನು ದಾರಿ ತಪ್ಪಿಸುವುದು ಅವರಿಗೆ ಸಿದ್ಧಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.