ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ 2026-27ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. 17ನೇ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸುತ್ತಿದ್ದಾರೆಯಾದರೂ ಬೆಟ್ಡದಷ್ಟು ಸವಾಲುಗಳು ಎದುರಾಗಿದ್ದು ಹೇಗೆ ನಿಭಾಯಿಸಲಿದ್ದಾರೆ ಎಂದು ಕುತೂಹಲ ಮೂಡಿಸಿದೆ.
ಕಳೆದ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದ ಅವರು ಈ ಬಾರಿ ಗ್ಯಾರಂಟಿ ಜೊತೆಗೆ ದೀರ್ಘಕಾಲೀನ ಜನಪರ ಯೋಜನೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಅವರು ಕಳೆದ ಒಂದು ತಿಂಗಳಿಂದ ಎಲ್ಲ ಇಲಾಖೆಗಳ ಸಚಿವರು, ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ.
ಬಜೆಟ್ ಗಾತ್ರ 4.50 ಲಕ್ಷ ಕೋಟಿ ರೂ. ಆಸುಪಾಸು:
2025-26ನೇ ಸಾಲಿನಲ್ಲಿ 4.09 ಲಕ್ಷ ಕೋಟಿ ರೂ. ಮೊತ್ತದ ಮುಂಗಡಪತ್ರ ಮಂಡಿಸಿತ್ತು. ಈ ವರ್ಷ ಬಜೆಟ್ ಗಾತ್ರ ಸುಮಾರು 4.50 ಲಕ್ಷ ಕೋಟಿ ತಲುಪುವ ಸಾಧ್ಯತೆಯಿದೆ. ಅಂದರೆ 40 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಳವಾಗಲಿದೆ.
2025-26ನೇ ಸಾಲಿಗೆ 1.14 ಲಕ್ಷ ಕೋಟಿ ರೂ. ಸಾಲ ಪಡೆಯುವುದಾಗಿ ಹೇಳಿದ್ದ ಸಿದ್ದರಾಮಯ್ಯ ಸರ್ಕಾರ 2026-27ನೇ ಸಾಲಿಗೂ 1.25 ಲಕ್ಷ ಕೋಟಿ ಸಾಲ ಪಡೆಯುವ ಸಾಧ್ಯತೆಗಳಿವೆ.
ಬಜೆಟ್‌ನ ಪ್ರಮುಖ ಆಕರ್ಷಣೆ
ಅನ್ನಭಾಗ್ಯದ ಅಕ್ಕಿ ಬದಲಿಗೆ 'ಇಂದಿರಾ ಆಹಾರ ಕಿಟ್' ಘೋಷಿಸುವ ಸಾಧ್ಯತೆಗಳಿವೆ. 5 ಕೆಜಿ ಅಕ್ಕಿ ಜತೆಗೆ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಹಾಗೂ ಹೆಸರುಕಾಳು ಒಳಗೊಂಡ 'ಇಂದಿರಾ ಕಿಟ್' ನೀಡಲಾಗುತ್ತದೆ.
ಆಶ್ರಯ ಯೋಜನೆ ಸೇರಿದಂತೆ ವಸತಿ ಯೋಜನೆಗಳ ಅಡಿಯಲ್ಲಿ ಸರ್ಕಾರ ಮನೆಗಳನ್ನು ನೀಡುತ್ತಿಲ್ಲ ಎಂದು ವಿಪಕ್ಷಗಳು ಆರೋಪಿಸುತ್ತಲೇ ಬಂದಿವೆ. ಈ ಆರೋಪದಿಂದ ಮುಕ್ತವಾಗಲು ಬೃಹತ್ ವಸತಿ ಹಂಚಿಕೆ ಯೋಜನೆಯನ್ನು ಪ್ರಕಟಿಸುವ ಸಾಧ್ಯತೆಗಳಿವೆ.
3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ 1.33 ಲಕ್ಷ ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದ್ದು, 70 ಸಾವಿರ ಕೋಟಿ ರೂ. ಬೇಕಾಗಲಿದೆ. ಈ ಯೋಜನೆಗೂ ಆರ್ಥಕ ನೆರವು ಘೋಷಿಸುವ ಸಾಧ್ಯತೆಗಳಿವೆ.
ಹಿಂದುಳಿದಿರುವ 172 ತಾಲೂಕುಗಳ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ 43,914 ಕೋಟಿ ರೂ. ನೀಡುವಂತೆ ಗೋವಿಂದ ರಾವ್ ಸಮಿತಿ ವರದಿ ನೀಡಿದೆ. ಅದರ ಅನ್ವಯ ಪ್ರಸಕ್ತ ಸಾಲಿಗೆ 9,000 ಕೋಟಿ ರೂ. ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಲೆ ಏರಿಕೆಯ ಬಿಸಿ?
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಸುಮಾರು 50 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಆರ್ಥಿಕ ವಚ್ಚವನ್ನು ಸರಿದೂಗಿಸಲು ಕೆಲವು ವಸ್ತುಗಳ ಬೆಲೆ ಏರಿಕೆ ಆಗಬಹುದು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ತಲಾ 1 ರೂ. ಹೆಚ್ಚಳ; ಅಬಕಾರಿ ಸುಂಕ; ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹಾಗೂ ಮೋಟಾರು ವಾಹನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಬೊಕ್ಕಸ ತುಂಬಿಸಿಕೊಳ್ಳುವ ಲೆಕ್ಕಾಚಾರವನ್ನು ಸರ್ಕಾರ ಹಾಕಿಕೊಂಡಿದೆ.