ಬೆಂಗಳೂರು: ಜನವರಿ 22 ರಂದು ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ವಂದನಾ ನಿರ್ಣಯ ಪ್ರಸ್ತಾಪವನ್ನು ವಿಧಾನಸಭೆಯಲ್ಲಿ ಇಂದು ಅಂಗೀಕರಿಸಲಾಯಿತು.
ಅಂಗೀಕಾರಕ್ಕೂ ಮುನ್ನ ರಾಜ್ಯಪಾಲರ ಮೇಲಿನ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶೀಯವರಿಗೆ ಮನೆಗಳನ್ನು ನೀಡುವುದಿಲ್ಲ ಹಾಗೂ ಅವರನ್ನು ರಾಜ್ಯದಿಂದ ಹೊರಗೆ ಕಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪದ್ಮಶ್ರೀ ವಿಜೇತ ಮಾಜಿ ರಾಜ್ಯಸಭಾ ಸದಸ್ಯೆ ಜಯಶ್ರೀ ಯವರ ಭೂಮಿಯ ಸರ್ವೇ ಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಯು ಕರ್ತವ್ಯಚ್ಯುತಿ ಮಾಡಿದ್ದರೆ, ಅವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಪ್ಪು ಎಸಗಿದ ಅಧಿಕಾರಿಯ ಮೇಲೆ ನಿಸ್ಸಂದೇಹವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರ ಹಾದಿಯನ್ನು ತಪ್ಪಿಲ್ಲ ಹಾಗೂ ನಾನು ಅಸಹಾಯಕ ಮುಖ್ಯಮಂತ್ರಿಯೂ ಅಲ್ಲ. 2.5 ವರ್ಷದಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.
ಹಿಂದುಳಿದ ವರ್ಗದವರ ಬಗ್ಗೆ ಕಾಳಜಿಯಿರುವ ನಮ್ಮ ಸರ್ಕಾರ 2013-14 ರಿಂದ 2018 ರವರೆಗೆ 543 ಹಾಸ್ಟೆಲ್ ಗಳನ್ನು ನಿರ್ಮಿಸಿದೆ. ನಂತರ ಬಂದ ಬಿಜೆಪಿ ಸರ್ಕಾರ 2019 ರಿಂದ 2023) ಕೇವಲ 5 ಹಾಸ್ಟೆಲ್ ಗಳನ್ನು ನಿರ್ಮಿಸಿದೆ. ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 2023-24 ರಿಂದ ಇಲ್ಲಿಯವರೆಗೆ 220 ಹಾಸ್ಟೆಲ್ ನಿರ್ಮಿಸಿದೆ ಎಂದು ಹೇಳಿದರು.