2026-03-07 05:18:19

CM Siddaramaiah calls for cooperation in interstate | ಅಂತಾರಾಜ್ಯ ಅಂತರ್‌ ದೇಶೀಯ ನದಿ ನಿರ್ವಹಣೆಯಲ್ಲಿ ಸಹಕಾರ ಮುಖ್ಯ ಸಿಎಂ ಸಿದ್ದರಾಮಯ್ಯ | Speed News Kannada

CM Siddaramaiah calls for cooperation in interstate | ಅಂತಾರಾಜ್ಯ ಅಂತರ್‌ ದೇಶೀಯ ನದಿ ನಿರ್ವಹಣೆಯಲ್ಲಿ ಸಹಕಾರ ಮುಖ್ಯ ಸಿಎಂ ಸಿದ್ದರಾಮಯ್ಯ  | Speed News Kannada

ಬೆಂಗಳೂರು: ಜಗತ್ತಿನಾದ್ಯಂತ ನೀರಿನ ಕೊರತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಅಂತರ್ ರಾಜ್ಯ ಮತ್ತು ಅಂತರ್ ದೇಶೀಯ ನದಿ ನಿರ್ವಹಣೆಯಲ್ಲಿ ಸಹಕಾರ, ಮಾಹಿತಿ ಹಂಚಿಕೆ ಮತ್ತು ರಾಜತಾಂತ್ರಿಕವಾಗಿ ಪೂರಕವಾದ ಕ್ರಮಗಳು ತುಂಬಾ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. 
ಅವರು ಇಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ 'ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ಆಯಾಮಗಳಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನಾವು ವೈಜ್ಞಾನಿಕವಾದ, ಸಂಸ್ಥೆಗಳ ಬಲವರ್ಧನೆಯಿಂದ ರೂಪುಗೊಂಡ ಸಮಗ್ರ ಪರಿಹಾರವನ್ನು ರೂಪಿಸಬೇಕು ಮತ್ತು ಅವುಗಳು ಸುರಕ್ಷತೆ, ಸುಸ್ಥಿರತೆ ಮತ್ತು ಹಂಚಿಕೊಂಡ ಹೊಣೆಗಾರಿಕೆಯ ದೂರದೃಷ್ಟಿಯನ್ನು ಹೊಂದಿರಬೇಕು.
ಮೊದಲನೆಯದಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ನಿಯಮಗಳ ಪಾಲನೆಗೆ ಸೀಮಿತವಾಗಿಸಿಕೊಳ್ಳದೇ, ನಿಯಮಿತ ತಪಾಸಣೆ, ಸುರಕ್ಷತಾ ಲೆಕ್ಕಪರಿಶೋಧನೆ, ತುರ್ತು ಕ್ರಿಯಾ ಯೋಜನೆಗಳನ್ನು ಅಪಾಯ ನಿರ್ವಹಣೆಯ ಸಾಧನಗಳಂತೆ ಬಳಸುವ ಸಮಗ್ರ ಸಂಸ್ಕೃತಿಯನ್ನು ರೂಪಿಸಬೇಕು. ಎರಡನೆಯದಾಗಿ, ನಿಯಂತ್ರಣಾ ಮತ್ತು ತಾಂತ್ರಿಕ ಸಂಸ್ಥೆಗಳು ಅಪಾಯಗಳನ್ನಾಧರಿಸಿದ ನಿರ್ಣಯಿಸುವ ವ್ಯವಸ್ಥೆಗಳನ್ನು ಸ್ಥಾಪಿಸಬೇಕು. ಉಪಕರಣಗಳ ವ್ಯವಸ್ಥೆಗಳು, ದೂರಸಂವೇದಿ ತಂತ್ರಜ್ಞಾನ, ರಚನೆಗಳ ಸ್ಥಿತಿಗಳನ್ನು ಸೂಚಿಸುವ ವ್ಯವಸ್ಥೆಗಳಿಂದ ಬರುವ ದತ್ತಾಂಶವನ್ನು ನೈಜ ಸಮಯದ ಮಾಹಿತಿ ಫಲಕಗಳಲ್ಲಿ ಅಳವಡಿಸಿಕೊಳ್ಳಬೇಕು.
ಮೂರನೆಯದಾಗಿ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು, ಸಂಯೋಜಿತ ವ್ಯವಸ್ಥೆಗಳ ಮೂಲಕ ಹವಾಮಾನ ವೈಪರೀತ್ಯ ಮತ್ತು ಹಳೆಯ ಮೂಲಸೌಕರ್ಯದಿಂದ ಉದ್ಭವಿಸುವ ಸಂಕೀರ್ಣ ಅಪಾಯಗಳನ್ನು ಮುಂಚಿತವಾಗಿಯೇ ಗುರುತಿಸಬೇಕು. ನಾಲ್ಕನೆಯದಾಗಿ, ಹಣಕಾಸು ಸಂಸ್ಥೆಗಳು ಮತ್ತು ಅಭಿವೃದ್ಧಿ ಪಾಲುದಾರರು, ಸಾಂದರ್ಭಿಕ ದುರಸ್ತಿಕಾರ್ಯ ಕೈಗೊಳ್ಳುವುದರ ಬದಲು ದೀರ್ಘಾವಧಿಯ, ಆಧುನಿಕ, ಸುಸ್ಥಿರತೆ, ಹೂಳು ನಿರ್ವಹಣೆ ಯನ್ನೊಳಗೊಂಡ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಕೊನೆಯದಾಗಿ, ಸ್ಥಳೀಯ ಆಡಳಿತಗಳು ಮತ್ತು ಸಮುದಾಯಗಳಿಗೆ ಜಾಗೃತ ಹಾಗೂ ಸನ್ನದ್ಧರಾಗಿರಲು ಶಕ್ತಿ ತುಂಬಬೇಕು ಎಂದು ಹೇಳಿದರು.
ವಿವಿಧ ದೇಶಗಳ ತಜ್ಞರು, ನೀತಿ ನಿರೂಪಕರು ಹಾಗೂ ಅಭ್ಯಾಸಿಗಳು ಇಲ್ಲಿ ಒಟ್ಟುಗೂಡಿ ಅಣೆಕಟ್ಟು ಸುರಕ್ಷತೆ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆಯ ಜವಾಬ್ದಾರಿ ಕುರಿತು ಚರ್ಚಿಸುವುದು ಮುಖ್ಯ. ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಅಣೆಕಟ್ಟುಗಳನ್ನು "ಆಧುನಿಕ ಭಾರತದ ದೇವಾಲಯಗಳು" ಎಂದು ಕರೆದಿದ್ದರು. ಇವು ನಮ್ಮ ಸಾಮೂಹಿಕ ಆಕಾಂಕ್ಷೆಗಳ ಸಂಕೇತಗಳು. ಕೃಷಿ ಸಮೃದ್ಧಿ ಮತ್ತು ಕೈಗಾರಿಕಾ ಪ್ರಗತಿಯ ಜೀವಾಳವೂ ಆಗಿವೆ ಎಂದರು.
ದೇಶದಲ್ಲಿ ಇಂದು 6,628 ನಿರ್ದಿಷ್ಟ ಅಣೆಕಟ್ಟುಗಳಿವೆ. ಈ ಮೂಲಕ ನಾವು ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಅಣೆಕಟ್ಟುಗಳನ್ನು ಹೊಂದಿರುವ ರಾಷ್ಟ್ರವಾಗಿದ್ದೇವೆ. ಕರ್ನಾಟಕದಲ್ಲಿ 231 ನಿರ್ದಿಷ್ಟ ಅಣೆಕಟ್ಟುಗಳಿದ್ದು, ದೇಶದಲ್ಲಿ ಆರನೇ ಸ್ಥಾನದಲ್ಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ನಂತರ ದೇವರಾಜ ಅರಸು ಅವರಿಂದ ಮೊದಲುಗೊಂಡು ನಂತರದಲ್ಲಿ ಬಂದ  ಆಡಳಿತವು, ಸಮಾನ ಪ್ರಾದೇಶಿಕ ಅಭಿವೃದ್ಧಿಗಾಗಿ ನೀರಾವರಿ ವ್ಯವಸ್ಥೆಯನ್ನು ವಿಸ್ತರಿಸಿದರು ಎಂದು ತಿಳಿಸಿದರು.
ಡಿಸಿಎಂ ಡಿಕೆ ಶಿವಕುಮಾರ್‌, ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ, ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ವಿಶ್ವಬ್ಯಾಂಕ್ ಉಪಾಧ್ಯಕ್ಷ ಜೊಹನ್ನೆಸ್ ಕಾರ್ನೆಲ್ಸ್ ಮಾರಿಯಾ ಜಟ್, ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಸುಬೋಧ್ ಯಾದವ್, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಅನುಪಮ್ ಪ್ರಸಾದ್, ಜಪಾನಿನ ಐಸಿಹೆಚ್ಎಆರ್ ಎಂ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ತೊಶಿಯೋ ಕೊಯ್ಕೆ, ಬೃಹತ್ ಅಣೆಕಟ್ಟು ಅಂತಾರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಿ.ಕೆ. ಶರ್ಮಾ, ಭಾರತೀಯ ವಿಜ್ಞಾನ್ ಸಂಸ್ಥೆಯ ಡೀನ್ ಪ್ರೋ. ಸತ್ಯಂ ಸುವಾಸ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.