ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು (ಭಾನುವಾರ, ಮಾರ್ಚ್ 15) ರಾಜ್ಯದ ಸಾವಿರಾರು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಳೆಯ ಬಾಕಿ ಇರುವ ತುಟ್ಟಿಭತ್ಯೆ (DA) ಪಾವತಿಸುವುದಾಗಿ ಘೋಷಿಸಿದ್ದಾರೆ. 2009ರ ಆರ್‌ಒಪಿಎ ಅಡಿಯಲ್ಲಿ ಬಾಕಿ ಇರುವ ಡಿಎ ಹಣವನ್ನು ಮಾರ್ಚ್ ತಿಂಗಳಿನಿಂದಲೇ ನೌಕರರ ಖಾತೆಗೆ ಜಮಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ಇನ್ನೂ ಕೆಲವೇ ಕ್ಷಣಗಳಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಈ ಘೋಷಣೆಗೂ ಕೆಲವೇ ಗಂಟೆಗಳ ಮೊದಲು ಮಮತಾ ಬ್ಯಾನರ್ಜಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಡಿಎ ಜೊತೆಗೆ, ಹಿಂದೂ ಅರ್ಚಕರು ಮತ್ತು ಮುಸ್ಲಿಂ ಮೌಲ್ವಿಗಳ ಮಾಸಿಕ ಗೌರವಧನವನ್ನು 500 ರೂಪಾಯಿಗಳಷ್ಟು ಹೆಚ್ಚಿಸಿ, ಒಟ್ಟು 2,000 ರೂಪಾಯಿಗೆ ಏರಿಸಲಾಗಿದೆ. ಶಿಕ್ಷಕರು, ಪಂಚಾಯತ್ ಮತ್ತು ಮುನ್ಸಿಪಲ್ ಸಿಬ್ಬಂದಿ ಸೇರಿದಂತೆ ಸುಮಾರು 20 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರು ಈ ನಿರ್ಧಾರದಿಂದ ಪ್ರಯೋಜನ ಪಡೆಯಲಿದ್ದಾರೆ.