2026-03-07 06:15:30

CM Mamata Banerjee | ಎಸ್‌ ಐಆರ್ ಸುಪ್ರೀಂಕೋರ್ಟ್‌ ನಲ್ಲಿ ವಾದಿಸಿ ಗಮನ ಸೆಳೆದ ಸಿಎಂ ಮಮತಾ ಬ್ಯಾನರ್ಜಿ | Speed News Kannada

CM Mamata Banerjee | ಎಸ್‌ ಐಆರ್ ಸುಪ್ರೀಂಕೋರ್ಟ್‌ ನಲ್ಲಿ ವಾದಿಸಿ ಗಮನ ಸೆಳೆದ ಸಿಎಂ ಮಮತಾ ಬ್ಯಾನರ್ಜಿ | Speed News Kannada

ನವದೆಹಲಿ: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ‌ (ಎಸ್‌ ಐ ಆರ್)ಗೆ ಸಂಬಂಧಪಟ್ಟಂತೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ವಾದ ಮಂಡಿಸಿ ಗಮನ ಸೆಳೆದಿದ್ದಾರೆ. 
ದೇಶಾದ್ಯಂತ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ನ್ಯಾಯಾಲಯದ ಅನುಮತಿ ಪಡೆದು ಮಮತಾ ಬ್ಯಾನರ್ಜಿ ವಾದ ಮಂಡಿಸಿದರು.
ವಿನಾ ಕಾರಣ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಿಕೊಂಡು ಎಸ್‌ ಐಆರ್‌ ನಡೆಸಲಾಗುತ್ತಿದೆ. ಆದ್ದರಿಂದ ನ್ಯಾಯಾಲಯ ಮಧ್ಯೆ ಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ಅವರು ಕೋರಿದರು. ಬದುಕಿರುವವರು ಮತ್ತು ಅಮಾಯಕ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ. ಚುನಾವಣಾ ಆಯೋಗವೇ ಈ ಅವಘಡಗಳಿಗೆ ಕಾರಣವಾಗಿದೆ ಎಂದೂ ಆಪಾದಿಸಿದರು.
ನಮ್ಮ ರಾಜ್ಯದಲ್ಲಿ ಅಂದಾಜು  1.30 ಕೋಟಿ ಮತದಾರರ ಹೆಸರನ್ನು ಕೈಬಿಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಮೈಕ್ರೋ ಅಬ್ಸರ್ವರ್‌ ಗಳನ್ನು ನೇಮಿಸಿ ಪ್ರಜಾಪ್ರಭುತ್ವದ ಆಶಯಗಳಿಗೆ ಕೊಡಲಿ ಪೆಟ್ಟು ನೀಡಲಾಗಿದೆ. ಆಧಾರ್‌ ಮತ್ತು ವಸತಿ ಪತ್ರಗಳನ್ನು ಆಯೋಗ ಪರಿಗಣಿಸುತ್ತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ನ್ಯಾಯವು ಬಾಗಿಲಿನ ಹಿಂದೆ ಇದ್ದಾಗ ನ್ಯಾಯ ದೊರೆಯಲು ಹೇಗೆ ಸಾಧ್ಯ? ಚುನಾವಣಾ ಆಯೋಗಕ್ಕೆ ಎಲ್ಲಾ ವಿವರಗಳನ್ನು ಒಳಗೊಂಡ ಆರು ಪತ್ರಗಳನ್ನು ಬರೆದಿದ್ದೇನೆ. ಆದರೆ, ಇದುವರೆಗೂ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.  
ಮಧ್ಯೆ ಪ್ರವೇಶಿಸಿದ ನ್ಯಾ. ಸೂರ್ಯಕಾಂತ್ ಅವರು ಪಶ್ಚಿಮ ಬಂಗಾಳ ರಾಜ್ಯವು ತನ್ನದೇ ಆದ ಅರ್ಜಿಯನ್ನು ಸಲ್ಲಿಸಿದೆ. ಅತ್ಯುತ್ತಮ ಕಾನೂನು ತಂಡವು ರಾಜ್ಯವನ್ನು ಪ್ರತಿನಿಧಿಸುತ್ತಿದೆ. ಆದರೂ  ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ವಾದವನ್ನು ಮುಂದುವರಿಸಲು ಅವಕಾಶ ನೀಡುವುದಾಗಿ ಹೇಳಿದರು.
ವಾದ ಮುಂದುವರಿಸಿದ ಮಮತಾ ಅವರು, ವಿವಾಹಿತ ಮಹಿಳೆಯರು ಅತ್ತೆ-ಮಾವನ ಮನೆಗೆ ಸ್ಥಳಾಂತರಗೊಂಡು ಪತಿಯ ಉಪನಾಮ ಬಳಸಿದ್ದಕ್ಕಾಗಿ ಹೆಸರು ತೆಗೆದು ಹಾಕಲಾಗುತ್ತಿದೆ. ಆಧಾರ್ ಕಾರ್ಡ್ ಪುರಾವೆ ದಾಖಲೆಗಳಲ್ಲಿ ಒಂದಾಗಿರುತ್ತದೆ ಎಂದು ನ್ಯಾಯಾಲಯ ಆದೇಶ ನೀಡಿದ್ದರೂ ಆಯೋಗ ಪರಿಗಣಿಸುತ್ತಿಲ್ಲ. ಇತರೆ ರಾಜ್ಯಗಳಲ್ಲಿ ನಿವಾಸ ಪ್ರಮಾಣಪತ್ರ, ಕುಟುಂಬ ನೋಂದಣಿ ಕಾರ್ಡ್, ಸರ್ಕಾರಿ ವಸತಿ ಕಾರ್ಡ್ ಅನ್ನು ಪರಿಗಣಿಸಲಾಗುತ್ತಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ನಿರಾಕರಿಸಲಾಗುತ್ತಿದೆ ಎಂದು ಆಪಾದಿಸಿದರು.
ಅಂತಿಮವಾಗಿ ನ್ಯಾಯಾಲಯವು ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ನೋಟಿಸ್‌ ನೀಡಿ ವಿಚಾರಣೆಯನ್ನು ಮುಂದೂಡಿತು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.