2026-03-07 05:28:44

CM Mamata Banerjee Files PIL in Supreme Court Against SIR | ಎಸ್‌ಐಆರ್‌ ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ ಸಿಎಂ ಮಮತಾ ಬ್ಯಾನರ್ಜಿ | Speed News Kannada

CM Mamata Banerjee Files PIL in Supreme Court Against SIR | ಎಸ್‌ಐಆರ್‌ ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ ಸಿಎಂ ಮಮತಾ ಬ್ಯಾನರ್ಜಿ | Speed News Kannada

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ನಡೆಸುತ್ತಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. 
ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಎಸ್ೈಆರ್‌ ನಿಂದ ಭಾರಿ ಪ್ರಮಾಣದಲ್ಲಿ ಅರ್ಹ ಮತದಾರರು ಮತ ಚಲಾಯಿಸುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಕಳೆದ ವರ್ಷ ತಯಾರಿಸಲಾದ ಮತದಾರರ ಪಟ್ಟಿಯ ಆಧಾರದಲ್ಲೇ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ. ಈ ಪ್ರಕರಣ ಕರಿತು ಸುಪ್ರೀಂ ಕೋರ್ಟ್ ಈ ವಾರದಲ್ಲೇ ವಿಚಾರಣೆ ಆರಂಭಿಸಲಿದೆ  ಎಂದು ಹೇಳಲಾಗುತ್ತಿದೆ.
ದೆಹಲಿಗೆ ಆಗಮಿಸಿರುವ ಅವರು ವೈಯಕ್ತಿಕವಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಚುನಾವಣಾ ಆಯೋಗವು ರಾಜಕೀಯ ಪಕ್ಷಪಾತಿ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದ್ದಾರೆ.
ವಿಶೇಷವಾಗಿ ವೃದ್ಧರು, ಅಂಗವಿಕಲರು, ವಿವಾಹದ ನಂತರ ಉಪನಾಮಗಳನ್ನು ಬದಲಾಯಿಸಿಕೊಂಡಿರುವ ಮಹಿಳೆಯರು ಮತ್ತು ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. 
ಈ ಸಂಬಂಧ ಮಮತಾ ದೀದಿ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಈ ಪ್ರಕ್ರಿಯೆಯು ಕಿರುಕುಳ, ಒತ್ತಡ, ಆತಂಕ, ಆತ್ಮಹತ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ 140 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದರು.
ಈ ಮಧ್ಯೆ ಇಂದು 15 ಸದಸ್ಯರ ಟಿಎಂಸಿ ನಿಯೋಗದೊಂದಿಗೆ ಮಮತಾ ಬ್ಯಾನರ್ಜಿ ಅವರು , ಚುನಾವಣಾ ಆಯೋಗದ ಕಚೇರಿಯಲ್ಲಿ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.