ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಕಣ ರಂಗೇರಿದೆ. ನಟ-ರಾಜಕಾರಣಿ ದಳಪತಿ ವಿಜಯ್ ದೊಡ್ಡ ಘೋಷಣೆ ಮಾಡಿದ್ದಾರೆ. TVK ಅಧ್ಯಕ್ಷನಾದ ವಿಜಯ್, ಏಪ್ರಿಲ್ 23ರಂದು ನಡೆಯಲಿರುವ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಚೆನ್ನೈನ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಿಂದ ಅವರು ಕಣಕ್ಕಿಳಿಯಲಿದ್ದಾರೆ. ಪಕ್ಷವು 234 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಟಿ ನಗರ, ಮೈಲಾಪುರ, ವಿಲ್ಲಿವಕ್ಕಂ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಈ ಚುನಾವಣೆ ನೇರ ಹೋರಾಟವಾಗಿದ್ದು, ಇದು ನಮ್ಮ ಹಾಗೂ ಎಂ.ಕೆ. ಸ್ಟಾಲಿನ್ ಮೈತ್ರಿಕೂಟದ ನಡುವೆ ನಡೆಯಲಿದೆ ಎಂದು ವಿಜಯ್ ಹೇಳಿದ್ದಾರೆ. ಜನರಿಗೆ ಸೇವೆ ಮಾಡುವವರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ವರ್ಷ ಮೇಲ್ಪಟ್ಟ ನಿರುದ್ಯೋಗಿಗಳಿಗೆ ತಿಂಗಳಿಗೆ ₹4,000, ಡಿಪ್ಲೊಮಾ ಹೊಂದಿದವರಿಗೆ ₹2,500 ಭತ್ಯೆ ನೀಡುವುದಾಗ ಭರವಸೆ ನೀಡಿದ್ದಾರೆ. ಹಾಗೆಯೇ, 12ನೇ ತರಗತಿಯಿಂದ ಪಿಎಚ್‌ಡಿ ವರೆಗೆ ₹20 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುವ ಯೋಜನೆಯನ್ನು ಘೋಷಿಸಿದ್ದಾರೆ.
ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ, ಮಹಿಳೆಯರ ಸುರಕ್ಷತೆ ಖಚಿತಪಡಿಸುತ್ತೇವೆ, ಮಾದಕವಸ್ತು ಮುಕ್ತ ತಮಿಳುನಾಡು ನಿರ್ಮಿಸುತ್ತೇವೆ ಎಂದು ವಿಜಯ್ ಭರವಸೆ ನೀಡಿದ್ದಾರೆ. ಒಟ್ಟಾರೆ, ವಿಜಯ್ ಘೋಷಣೆಗಳು ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ರಣರಂಗ ಇನ್ನಷ್ಟು ಕುತೂಹಲ ಕೆರಳಿಸಿದೆ.